ADVERTISEMENT

ಗೂಗಲ್ ಮ್ಯಾಪ್ ನಂಬಿ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿದ ಬಿಹಾರದ ಕುಟುಂಬ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 16:14 IST
Last Updated 6 ಡಿಸೆಂಬರ್ 2024, 16:14 IST
ಖಾನಾಪುರದ 112 ವಾಹನದ ಇನ್-ಚಾರ್ಜ್ ಅಧಿಕಾರಿ ಬಡಿಗೇರ ಅವರ ಜೊತೆ ಖಾನಾಪುರ ಅರಣ್ಯದಲ್ಲಿ ಪತ್ತೆಯಾದ ಬಿಹಾರದ ರಾಜದಾಸ್
ಖಾನಾಪುರದ 112 ವಾಹನದ ಇನ್-ಚಾರ್ಜ್ ಅಧಿಕಾರಿ ಬಡಿಗೇರ ಅವರ ಜೊತೆ ಖಾನಾಪುರ ಅರಣ್ಯದಲ್ಲಿ ಪತ್ತೆಯಾದ ಬಿಹಾರದ ರಾಜದಾಸ್   

ಖಾನಾಪುರ (ಬೆಳಗಾವಿ ಜಿಲ್ಲೆ): ಗೂಗಲ್ ಮ್ಯಾಪ್ ನಂಬಿ ಪೂರ್ವ ನಿರ್ಧರಿತ ಸ್ಥಳಕ್ಕೆ ಪ್ರಯಾಣಿಸುವಾಗ ಮಾರ್ಗಮಧ್ಯೆ ದಟ್ಟ ಅರಣ್ಯಕ್ಕೆ ತಲುಪಿ ಪರದಾಡಿದ ಬಿಹಾರದ ಕುಟುಂಬವೊಂದನ್ನು ಖಾನಾಪುರ ಠಾಣೆಯ ಪೊಲೀಸರು ರಕ್ಷಿಸಿದ್ದಾರೆ.

ತಾಲ್ಲೂಕಿನ ಭೀಮಗಡ ವನ್ಯಧಾಮದ ಶಿರೋಲಿ-ಜಾಮಗಾಂವ ಅರಣ್ಯದಲ್ಲಿ ಗುರುವಾರ ಈ ಘಟನೆ ನಡೆದಿದೆ. ಬಿಹಾರದ ರಾಜದಾಸ್ ರಣಜಿತ್ ದಾಸ್ ತಮ್ಮ ಕುಟುಂಬ ಸಮೇತ ಉಜ್ಜಯನಿ ನಗರದಿಂದ ನೆರೆಯ ಗೋವಾಕ್ಕೆ ಕಾರಿನಲ್ಲಿ ಪ್ರವಾಸ ಕೈಗೊಂಡಿದ್ದರು. ತಮ್ಮ ಮೊಬೈಲ್ ನಲ್ಲಿ ಗೋವಾದ ಪರವರಿ ನಗರದಲ್ಲಿ ತಾವು ತಲುಪಬೇಕಿದ್ದ ಸ್ಥಳದ ಲೊಕೇಶನ್ ಅಳವಡಿಸಿಕೊಂಡು ಮ್ಯಾಪ್ ತೋರಿಸಿದ ಹಾದಿಯಲ್ಲಿ ಪ್ರಯಾಣ ಮಾಡುತ್ತಿದ್ದರು.

ಗೂಗಲ್ ಮ್ಯಾಪ್ ತೋರಿಸಿದಂತೆ ಸಾಗಿದ ಅವರು ಬುಧವಾರ ಮಧ್ಯರಾತ್ರಿ ತಾಲ್ಲೂಕಿನ ಭೀಮಗಡ ವನ್ಯಧಾಮದ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗಮಧ್ಯದ  ಅರಣ್ಯದಲ್ಲಿ ಮುಖ್ಯ ರಸ್ತೆಯಿಂದ 7-8 ಕಿಮೀ ಒಳಗೆ ಸಾಗಿದ್ದರು. ದಟ್ಟ ಅರಣ್ಯದಲ್ಲಿ ಗಾಢ ಕತ್ತಲಿನಲ್ಲಿ ಸಿಲುಕಿ ನಲುಗಿದ್ದ ರಾಜದಾಸ್ ಮತ್ತವರ ಕುಟುಂಬ ಅಕ್ಷರಶಃ ಆತಂಕಕ್ಕೊಳಗಾಗಿತ್ತು. ಅವರ ಬಳಿ ಇದ್ದ ಮೊಬೈಲ್ ನೆಟ್‌ವರ್ಕ್ ಸಹ ಕೈಕೊಟ್ಟಿತ್ತ್ತು. ತಮಗೆ ಬಂದೊದಗಿದ ಆಕಸ್ಮಿಕ ಪರಿಸ್ಥಿತಿಯಿಂದ ಧೃತಿಗೆಡದ ರಾಜದಾಸ್ ಇತರ ಸದಸ್ಯರಿಗೆ ಧೈರ್ಯ ತುಂಬಿ ಅವರೊಟ್ಟಿಗೆ ರಾತ್ರಿಯನ್ನು ಅದೇ ಸ್ಥಳದಲ್ಲಿ ಕಳೆದರು.

ADVERTISEMENT

ಬೆಳಗಾಗುತ್ತಲೇ ತಾವಿದ್ದ ಸ್ಥಳದಿಂದ ತುಸು ದೂರ ಕಾಲ್ನಡಿಗೆ ಮೂಲಕ ಕ್ರಮಿಸಿ ಮೊಬೈಲ್ ನೆಟವರ್ಕ್ ಹುಡುಕಾಡಿದ ಅವರು ನೆಟವರ್ಕ್ ಸಿಕ್ಕ ಕೂಡಲೇ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ ಪೊಲೀಸ್ ಕಂಟ್ರೋಲ್ ರೂಂನ ಸಂಪರ್ಕ ಸಾಧಿಸಿದ್ದರು. ಕಂಟ್ರೋಲ್ ರೂಂನ ಸಿಬ್ಬಂದಿ ಮಾರ್ಗದರ್ಶನದಂತೆ 112 ಸಂಖ್ಯೆಗೆ ಕರೆ ಮಾಡಿ ಖಾನಾಪುರ ಠಾಣೆಯ ಪೊಲೀಸರೊಂದಿಗೆ ಮಾತನಾಡಿ ತಮ್ಮ ಪರಿಸ್ಥಿತಿ ಹೇಳಿಕೊಂಡರು.

ತಕ್ಷಣ ಕಾರ್ಯಪ್ರವೃತ್ತರಾದ ಖಾನಾಪುರ ಠಾಣೆಯ ಪಿಐ ಮಂಜುನಾಥ ನಾಯ್ಕ, 112 ವಾಹನದ ಇನ್-ಚಾರ್ಜ್ ಅಧಿಕಾರಿ ಬಡಿಗೇರ, ಮುಖ್ಯ ಕಾನ್‌ಸ್ಟೆಬಲ್‌  ಜಯರಾಮ ಹಮ್ಮಣ್ಣವರ, ಕಾನ್‌ಸ್ಟೆಬಲ್ ಮಂಜುನಾಥ ಮುಸಳಿ ಹಾಗೂ ಸಿಬ್ಬಂದಿ ರಾಜದಾಸ್ ಅವರ ಲೈವ್ ಲೊಕೇಶನ್ ನೆರವಿನಿಂದ ಸ್ಥಳ ಪತ್ತೆ ಹಚ್ಚಿ ಸ್ಥಳೀಯರ ನೆರವಿನೊಂದಿಗೆ ಅವರನ್ನು ಸಂಪರ್ಕಿಸಿದರು. ಬಳಿಕ ಅವರಿಗೆ ಗೋವಾಕ್ಕೆ ತೆರಳುವ ಮುಖ್ಯ ರಸ್ತೆಯನ್ನು ತೋರಿಸಿ ಅವರ ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.