ಚನ್ನಮ್ಮನ ಕಿತ್ತೂರು: ‘ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೇಗೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿ, ‘₹33.78 ಕೋಟಿ ಅಂದಾಜು ವೆಚ್ಚದಲ್ಲಿ ತಾಲ್ಲೂಕು ಆಡಳಿತ ಸೌಧದ ಬಳಿ ಈ ನೂತನ ಆಸ್ಪತ್ರೆ ನಿರ್ಮಾಣವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.
‘ಹಿಂದೆ ಎಸ್‌ಡಿಪಿಯ ₹19 ಕೋಟಿ ಅನುದಾನದಲ್ಲಿ 50 ಹಾಸಿಗೆ ಆಸ್ಪತ್ರೆ ನಿರ್ಮಾಣ ಕಾಮಗಾರಿ ಮಾರ್ಪಡಿಸಿ ಈಗ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಈ ಭಾಗದ ಜನರಿಗೆ ಸಂತಸ ತಂದಿದೆ’ ಎಂದು ಹೇಳಿದರು.
‘ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಣದಿಂದ ಸುಮಾರು 6 ಕಿ.ಮೀ ಅಂತರದಲ್ಲಿ ಈಗಾಗಲೇ ಅಡಿಪಾಯ ಹಾಕಲು ₹3.21 ಕೋಟಿ ಅನಗತ್ಯ ವೆಚ್ಚ ಮಾಡಿದ್ದಾರೆ. ಇದಕ್ಕೆ ಕಾರಣವಾಗಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ, ಕ್ರಮ ಕೈಗೊಳ್ಳಲು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ’ ಎಂದು ಹೇಳಿದರು.
ಸಂಭ್ರಮಾಚರಣೆ: ಊರ ಸಮೀಪವೇ ನೂತನ ಆಸ್ಪತ್ರೆಗೆ ಅನುಮೋದನೆ ಸಿಕ್ಕ ಸುದ್ದಿ ತಿಳಿದ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಎಫ್. ಜಕಾತಿ, ಮುಖಂಡರಾದ ಕೃಷ್ಣ ಬಾಳೇಕುಂದರಗಿ, ಬಸವರಾಜ ಸಂಗೊಳ್ಳಿ, ಶಂಕರ ಬಡಿಗೇರ, ಅಪ್ಪಾಸಾಬ ಶಿಲೇದಾರ, ಯಲ್ಲಪ್ಪ ಕಡಕೋಳ, ಸಂಜೀವ ಲೋಕಾಪುರ, ಮುಸ್ತಾಕ ಸುತಗಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
‘ಹೋರಾಟಕ್ಕೆ ಸಿಕ್ಕ ಫಲ’:
‘ಪಟ್ಟಣದಿಂದ 6 ಕಿ.ಮೀ ಅಂದಾಜು ದೂರದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಮಾಡದೆ ಊರ ಬಳಿ ಮಾಡಲು ಹಿಂದೆ ಇಲ್ಲಿನ ಸಾರ್ವಜನಿಕರು ಹೋರಾಟ ಮಾಡಿದ್ದರು. ಈ ಹೋರಾಟಕ್ಕೆ ಅಂದು ಬಾಬಾಸಾಹೇಬ ಪಾಟೀಲ ಬೆಂಬಲ ಸೂಚಿಸಿ ಹೋರಾಟದಲ್ಲಿ ಭಾಗವಹಿಸಿದ್ದರು’ ಎಂದು ಕಾಂಗ್ರೆಸ್ ಮುಖಂಡ ಆಷ್ಫಾಕ್ ಹವಾಲ್ದಾರ್ ಪತ್ರಕರ್ತರಿಗೆ ತಿಳಿಸಿದರು. ‘ಈ ಭಾಗದ ಸಾರ್ವಜನಿಕರ ಹೋರಾಟಕ್ಕೆ ಈಗ ನ್ಯಾಯ ಸಿಕ್ಕಂತಾಗಿದೆ. ಬಡರೋಗಿಗಳಿಗೆ ಇದರಿಂದ ಹೆಚ್ಚು ಅನುಕೂಲ ಆಗಲಿದೆ’ ಎಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.