ಹುಕ್ಕೇರಿ: ತಾಲ್ಲೂಕಿನ ಯಮಕನಮರಡಿ ಗ್ರಾಮ ಪಂಚಾಯಿತಿಗೆ ಶನಿವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಶಿಂಧೆ ಅವರು ಗ್ರಾಮಠಾಣಾ ಆಸ್ತಿಗಳಿಗೆ ಇ–ಸ್ವತ್ತು ನಮೂನೆ 9 ವಿತರಿಸುವ ಕುರಿತು ಮಾಹಿತಿ ನೀಡಿದರು.
ಇ-ಸ್ವತ್ತು ನಮೂನೆ 9 ಕೋರಿ ಗ್ರಾಮ ಪಂಚಾಯಿಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಮನೆಗೆ ಖುದ್ದು ಭೇಟಿ ನೀಡಿ, ದಿಶಾಂಕ ಮೊಬೈಲ್ ಫೋನ್ ಆ್ಯಪ್ ಮೂಲಕ ಆಸ್ತಿಯ ಸರ್ವೆ ಮಾಡುವುದನ್ನು ಪರಿಶೀಲಿಸಿದರು.
‘ಇ-ಸ್ವತ್ತು ಉತಾರ ಪಡೆದ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸೌಲಭ್ಯ ದೊರೆಯುತ್ತದೆ’ ಎಂದು ತಿಳಿಸಿದರು.
ಹರಗಾಪೂರ ಗ್ರಾಮದಲ್ಲಿರುವ ಕಣಗಲಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕಕ್ಕೆ ಭೇಟಿ ನೀಡಿ, ನೀರಿನ ಗುಟಮಟ್ಟ ಕುರಿತ ವರದಿ ಪರಿಶೀಲಿಸಿದರು.
ಮತಗಟ್ಟೆಗೆ ಭೇಟಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅವರು ತಾಲ್ಲೂಕಿನ ಗೋಟೂರ ಗ್ರಾಮ ಪಂಚಾಯಿತಿ ಸೂಕ್ಷ್ಮ ಮತಗಟ್ಟೆ ಸಂಖ್ಯೆ 10ಕ್ಕೆ ಭೇಟಿ ನೀಡಿದರು. ನಂತರ ಹೆಬ್ಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಶಾಲೆಯ ಮತಗಟ್ಟೆ ಸಂಖ್ಯೆ 14ಕ್ಕೆ ಭೇಟಿ ನೀಡಿ, ಮೂಲಸೌಕರ್ಯ ಪರಿಶೀಲಿಸಿದರು. ಬಿ.ಎಲ್.ಒ.ಗಳಿಗೆ ಬಿಇಎಂಪಿ ಬಗ್ಗೆ ವಿಚಾರಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ, ಗ್ರಾಮ ಆಡಳಿತ ಅಧಿಕಾರಿ ಮಲ್ಲೇಶ ಕುರಿ, ಬಿಎಲ್ಒ ಸುಧಾ ಮಾಸೆವಾಡಿ, ಗೋಟೂರನ ಕವಿತಾ ವಾಘೆ, ಪಿಡಿಒ ಶ್ರುತಿ ಮಠಪತಿ, ಎಸ್.ಎಸ್. ಢಂಗ, ನರೇಗಾ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ ಪಿ., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ವಿನಾಯಕ ಪೂಜಾರ, ಎಇ ಸಂತೋಷ ಪಾಟೀಲ, ಐಇಸಿ ಸಂಯೋಜಕ ಮಹಾಂತೇಶ ಬಾದವನಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.