ADVERTISEMENT

ನಡೆಯದ ಗ್ರಾಮಸಭೆ: ಪಿಡಿಒಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 14:51 IST
Last Updated 24 ಜುಲೈ 2019, 14:51 IST

ಅಥಣಿ: ‘ಗ್ರಾಮ ಪಂಚಾಯ್ತಿ ವತಿಯಿಂದ ನಿಯಮಿತವಾಗಿ ಗ್ರಾಮ ಸಭೆ ನಡೆಸಿಲ್ಲ. ಇದರಿಂದ ಗ್ರಾಮದ ಅಬಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ, ಹಿಂದಿನ ಪಿಡಿಒ ಕಾಡೇಶ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ತಾಲ್ಲೂಕಿನ ಅಡಹಳ್ಳಿಯಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಹಲವು ಸಮಸ್ಯೆಗಳನ್ನು ಮಂಡಿಸಿದರು.

‘‌ಸರ್ಕಾರಿ ಪ್ರಾಥಮಿಕ ಹಾಗೂ ‍ಪ್ರೌಢಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿಲ್ಲ. ಇದರಿಂದಾಗಿ ಶಾಲೆಗಳಲ್ಲಿ ದೊರೆಯುತ್ತಿರುವ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ. 2016ರಿಂದ 2018ರವರೆಗೆ ರೈತರು ಪಾವತಿಸಿದ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ವಿಮಾ ಪರಿಹಾರ ನೀಡಬೇಕು. ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಿ.ಆರ್.ಸಿ. ಎಸ್.ಕೆ. ಖೋತ ಗ್ರಾಮದ ಶಾಲೆಗಳ ಕುರಿತು ಮಾತನಾಡುವಾಗ ಮಧ್ಯಪ್ರವೇಶಿಸಿದ ಗ್ರಾಮಸ್ಥರು, ನಿರ್ಲಕ್ಷ್ಯ ವಹಿಸಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

2016ನೇ ಸಾಲಿನಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಕೊಂಡ ಫಲಾನುಭವಿಗಳಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.

ಕೃಷಿ ಅಧಿಕಾರಿ ಪಿ.ಎನ್. ವಾಲಿ, ಉಪನ್ಯಾಸಕ ಎಸ್.ಟಿ. ಮಜ್ಜಗಿ, ಅಂಗನವಾಡಿ ಮೇಲ್ವಿಚಾರಕಿ ಎನ್.ಪಿ. ಮಾಳಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರುಕ್ಮವ್ವ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೂಪಾ ಹಾದಿಮನಿ, ನೋಡಲ್‌ ಅಧಿಕಾರಿ ಐಗಳಿ ಬುಜಬಲಿ, ಪಿಡಿಒ ಆರ್.ಎಸ್. ಪೋತದಾರ, ಸದಸ್ಯ ಬಸವರಾಜ ಧೂಳಶೆಟ್ಟಿ, ಶ್ರೀಶೈಲ ತಾಂವಶಿ, ಸೂರ್ಯಕಾಂತ ಡಂಬಳಕರ, ಮಹಾದೇವ ಹಿಪ್ಪರಗಿ, ರಾಜು ಮಾಳಿ, ಘೂಳಪ್ಪ ಕೋಳಿ, ಎಸ್.ಪಿ. ತಾಂವಶಿ, ಲಕ್ಷ್ಮಿಬಾಯಿ ಪತ್ತಾರ, ವಿಜಯಲಕ್ಷ್ಮಿ ಕೆಂಚಣ್ಣವರ, ಸಿ.ಎಂ. ಹುಕಮನಾಳ, ಸುನೀಲ ಕೆಂಚಣ್ಣವರ, ಅರುಣ ಕೋಹಳ್ಳಿ, ಶ್ರೀಕಾಂತ ಪತ್ತಾರ, ಯಮನಪ್ಪ ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.