ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ಬಳ್ಳಾರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹16 ಕೋಟಿ ಜಿಎಸ್‌ಟಿ ವಂಚಿಸಿದ ಆರೋಪಿಯನ್ನು ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಯಾವುದೇ ಅಧಿಕೃತ ವ್ಯವಹಾರ ಮಾಡದೇ ಕೋಟ್ಯಂತರ ರೂಪಾಯಿ ವ್ಯವಹಾರದ ಇನ್‌ವಾಯ್ಸ್‌ಗಳನ್ನು ಸೃಷ್ಟಿ ಮಾಡಿದ್ದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಕಂಪನಿಗಳು ಇವೆ ಎಂದು ನಮೂದಾಗಿದ್ದ ಬಳ್ಳಾರಿಯ ಮೂರು ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತು.
ಈ ಆರೋಪಿ ವಿವಿಧ ಹೆಸರುಗಳಲ್ಲಿ ನಕಲಿ ಕಂಪನಿಗಳ ದಾಖಲೆ ಸೃಷ್ಟಿಸಿ, ವ್ಯವಹಾರ ನಡೆಸಿದ ಹಾಗೆ ಇನ್‌ವಾಯ್ಸ್‌ಗಳನ್ನು ಸಿದ್ಧಪಡಿಸಿ, ನಕಲಿ ಒಪ್ಪಂದ, ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದಾನೆ. ಇದಕ್ಕಾಗಿ ತನ್ನ ಕಚೇರಿಯ ನೌಕರರ ಆಧಾರ್ ಕಾರ್ಡ್, ಪಾನ್ ಕಾರ್ಡ್‌ಗಳನ್ನು ಬಳಸಿಕೊಂಡಿದ್ದಾನೆ.
ಒಟ್ಟು ₹16 ಕೋಟಿ ಮೌಲ್ಯದ ಇನ್‌ಪುಟ್ ಟ್ಯಾಕ್ಟ್ ಕ್ರೆಡಿಟ್ ಪಡೆದಿದ್ದಾನೆ. ಸದ್ಯ ಬಂಧಿಸಲಾದ ಆರೋಪಿ ಈ ಪ್ರಕರಣದ ‘ಪ್ರಮುಖ ಸೂತ್ರಧಾರ’ ಆಗಿದ್ದು, ಇನ್ನುಳಿದ ಆರೋಪಿಗಳನ್ನೂ ಬಂಧಿಸಲಾಗುವುದು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಜಿಎಸ್‌ಟಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.