ADVERTISEMENT

ಅತಿಥಿ ಉಪನ್ಯಾಸಕರ ನೇಮಕಾತಿ: ಅಕ್ರಮ ತಪ್ಪಿಸಿ-

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 8:47 IST
Last Updated 22 ಜನವರಿ 2022, 8:47 IST

ಬೆಳಗಾವಿ: ‘ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆನ್‌ಲೈನ್‌ನಲ್ಲಿ ವಿಷಯವಾರು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆಯ ಜಾಲತಾಣ ಹಾಗೂ ಸಂಬಂಧಿಸಿದ ಕಾಲೇಜುಗಳ ಸೂಚನಾಫಲಕಗಳಲ್ಲಿ ಪ್ರಕಟಿಸಬೇಕು. ಅಕ್ರಮ ನೇಮಕಾತಿ ತಪ್ಪಿಸಬೇಕು’ ಎಂದು ಹುಕ್ಕೇರಿ ತಾಲ್ಲೂಕು ಪಾಶ್ಚಾಪೂರದ ಅತಿಥಿ ಶಿಕ್ಷಕ ಎ.ವೈ. ಸೋನ್ಯಾಗೋಳ ಒತ್ತಾಯಿಸಿದ್ದಾರೆ.

‘2021–22ನೇ ಸಾಲೀನಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ 7,250 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಕೊನೆಯ ದಿನಾಂಕದವರೆಗೆ 30ಸಾವಿರಕ್ಕೂ ಜಾಸ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಬಹುತೇಕ ಕಾಲೇಜುಗಳಲ್ಲಿ ಪ್ರಾಚಾರ್ಯರು ಸ್ವಾರ್ಥ ಮತ್ತು ಕೆಲವು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಗುಪ್ತವಾಗಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಅಕ್ರಮವಾಗಿ ಆಯ್ಕೆ ಮಾಡಿಕೊಳ್ಳುತ್ತಾ ಬಂದಿರುವುದು ಹಿಂದಿನಿಂದಲೂ ನಡೆಯುತ್ತಿದೆ. ಇದರಿಂದ ಅನೇಕ ವರ್ಷ ಕೆಲಸ ಮಾಡಿದವರು ಮತ್ತು ಅರ್ಹರಿಗೆ ಅನ್ಯಾಯ ಆಗುತ್ತದೆ’ ಎಂದು ತಿಳಿಸಿದ್ದಾರೆ.

‘ಪ್ರಸಕ್ತ ವರ್ಷ ವೇತನ ಹೆಚ್ಚಿಸಿದ್ದರಿಂದ ಮತ್ತು ಕಾರ್ಯಭಾರ ಜಾಸ್ತಿ ಮಾಡಿದ್ದರಿಂದ ಅಕ್ರಮ ನೇಮಕಾತಿಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಲ್ಲಿ ಸಂದೇಹವಿಲ್ಲ. ಪ್ರಸಕ್ತ ವರ್ಷದ ನೇಮಕಾತಿಯಿಂದ ಬಹಳಷ್ಟು ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಿರುವಾಗ, ಪ್ರಾಚಾರ್ಯರ ಮಟ್ಟದಲ್ಲಿ ಅಕ್ರಮ ನೇಮಕಾತಿಗಳು ನಡೆದರೆ ಮತ್ತಷ್ಟು ಕುಗ್ಗುತ್ತಾರೆ. ಬೀದಿಗೆ ಬೀಳುತ್ತಾರೆ. ಇದಕ್ಕೆ ಅವಕಾಶ ಕೊಡಬಾರದು. ಪಾರದರ್ಶಕವಾಗಿ ಪ್ರಕ್ರಿಯೆ ನಡೆಯುವಂತ ಕ್ರಮ ಕೈಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.