ADVERTISEMENT

ಕಾಯಂಗೊಳಿಸಲು ಅತಿಥಿ ಶಿಕ್ಷಕರ ಆಗ್ರಹ

ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 12:09 IST
Last Updated 19 ಡಿಸೆಂಬರ್ 2018, 12:09 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಶಿಕ್ಷಕರು ‍ಬುಧವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅತಿಥಿ ಶಿಕ್ಷಕರು ‍ಬುಧವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು ಹಾಗೂ ಶಿಕ್ಷಕಿಯರಿಗೆ ವೇತನಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದವರು ಬುಧವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ 19,186 ಅತಿಥಿ ಶಿಕ್ಷಕರು ಹಲವು ವರ್ಷಗಳಿಂದಲೂ ಅಲ್ಪವೇತನ (₹7,500 ಹಾಗೂ ₹ 8ಸಾವಿರ) ಪಡೆದುಕೊಂಡು ದುಡಿಯುತ್ತಿದ್ದೇವೆ. ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ತಮ್ಮ ಕುಟುಂಬಗಳ ನಿರ್ವಹಣೆ ಮಾಡಲು ಪರದಾಡುತ್ತಿದ್ದೇವೆ. ಕೊಡುವ ಕಡಿಮೆ ವೇತನವನ್ನೂ 6 ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಇದರಿಂದಾಗಿ ಸಾಲ ಮಾಡಿಕೊಂಡು ಜೀವನ ನಡೆಸುವಂತಾಗಿದೆ’ ಎಂದು ತಿಳಿಸಿದರು.

‘ಸರ್ಕಾರವು ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ತಮಗೆ ಬೇಕಾದ ಸಮಯದಲ್ಲಿ ನೇಮಕ ಮಾಡಿಕೊಂಡು ಮಾರ್ಚ್‌ 31ಕ್ಕೆ ಬಿಡುಗಡೆ ಮಾಡುತ್ತದೆ. ಈ ರೀತಿ ಮಾಡುವುದರಿಂದ ನಾವು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ನಮ್ಮನ್ನು ನಿರಂತರವಾಗಿ ಕೆಲಸದಲ್ಲಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪದವಿ, ಸ್ನಾತಕೋತ್ತರ ಪದವಿ, ಡಿ.ಇಡಿ., ಬಿ.ಇಡಿ ವಿದ್ಯಾರ್ಹತೆ ಇದ್ದರೂ ಅಂಗನವಾಡಿ ಶಿಕ್ಷಕರು, ಶಾಲಾ ಆಯಾಗಳು, ಪೌರಕಾರ್ಮಿಕರಿಗಿಂತ ಕಡಿಮೆ ವೇತನ ಪಡೆದು ಸೇವಾ ಭದ್ರತೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದೇವೆ. ಸಮಸ್ಯೆ ಕುರಿತು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅತಿಥಿ ಶಿಕ್ಷಕರನ್ನು ಕಾಯಂ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ನವದೆಹಲಿ ಮತ್ತು ಹರಿಯಾಣ ಮಾದರಿಯಲ್ಲಿ ಕಾಯಂಗೊಳಿಸಬೇಕು. ಅತಿಥಿ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಮಾರ್ಚ್31ಕ್ಕೆ ಬಿಡುಗಡೆಗೊಳಿಸದೇ ಮುಂದುವರಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಕನಿಷ್ಠ ವೇತನ ನಿಗದಿಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಅತಿಥಿ ಬದಲಿಗೆ ಗೌರವ ಶಿಕ್ಷಕರೆಂದು ಪರಿಗಣಿಸಿ, ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಕೋರಿದರು.‌

ಸಂಘದ ಅಧ್ಯಕ್ಷ ಡಿ. ಕೋಟೇಶ, ಎ.ಕೆ. ಹುಲೆಪ್ಪ, ಭಾರತಿ ರಾಯಬಾಗಕರ, ರಾಜೇಶ್ ಎಂ.ಡಿ., ಶಿವಪುತ್ರಪ್ಪ ಎಂ.ಎ., ಈರಪ್ಪ ಬಿರಾದಾರ, ನವೀನಕುಮಾರ ಟಿ.ಜಿ., ಉಷಾ ಸಿ.ಪಿ. ನೇತೃತ್ವ ವಹಿಸಿದ್ದರು. ವಿವಿಧ ಜಿಲ್ಲೆಗಳ ನೂರಾರು ಅತಿಥಿ ಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.