‘ಗೀಲನ್ ಬಾ ಸಿಂಡ್ರೋಮ್’ ಕುರಿತು ಬೆಳಗಾವಿಯಲ್ಲಿ ನಡೆದ ಮುಂಜಾಗೃತಾ ಸಭೆಯಲ್ಲಿ ಸಿಇಒ ರಾಹುಲ್ ಶಿಂಧೆ ಮಾತನಾಡಿದರು
ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಗೀಲನ್ ಬಾ ಸಿಂಡ್ರೋಮ್ (Guillain Barre syndrome- GBS) ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರ್ನಾಟಕ– ಮಹಾರಾಷ್ಟ್ರ ‘ಸಯಾಮಿ’ ರಾಜ್ಯಗಳಂತೆ ಒಂದಕ್ಕೊಂದು ಅಂಟಿಕೊಂಡಿವೆ. ಎರಡೂ ರಾಜ್ಯಗಳ ನಡುವೆ ವ್ಯವಹಾರ– ಒಡನಾಟ ನಿರಂತರವಿದೆ. ಹೀಗಾಗಿ, ಗೀಲನ್ ಬಾ ಸಿಂಡ್ರೋಮ್ ಜಿಲ್ಲೆಗೂ ಪಸರಿಸಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ.
ಮಹಾರಾಷ್ಟ್ರದಲ್ಲಿ ಈವರೆಗೆ 10 ಸಾವು ಸಂಭವಿಸಿದ್ದು, 208 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕು ಅಂಟಿಕೊಳ್ಳುವ ಮುನ್ನವೇ ತುರ್ತು ಜಾಗೃತಿ ಹಾಗೂ ಅರಿವು ಮೂಡಿಸುವ ಕ್ರಮ ಕೈಗೊಳ್ಳಬೇಕು ಎಂಬ ಕೂಗೂ ಕೇಳಿಬಂದಿದೆ.
ನಿಪ್ಪಾಣಿ ತಾಲ್ಲೂಕಿನ ಡೊಣೇವಾಡಿ ಗ್ರಾಮದ 64ರ ವೃದ್ಧ ಹಾಗೂ ಹುಕ್ಕೇರಿಯ 14ರ ಬಾಲಕಿ ಈಚೆಗೆ ನರಗಳ ದೌರ್ಬಲ್ಯದಿಂದ ಮೃತಪಟ್ಟಿದ್ದಾರೆ. ಇವರಿಗೆ ಗೀಲನ್ ಬಾ ಸಿಂಡ್ರೋಮ್ ತಗಲಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಆದರೆ, ಮಾದರಿ ಪರೀಕ್ಷೆ ನಡೆಸಿಲ್ಲ. ಹೀಗಾಗಿ, ಈ ಸಾವುಗಳು ಗೀಲನ್ ಬಾ ಸಿಂಡ್ರೋಮ್‌ನಿಂದ ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಖಚಿತಪಡಿಸಿದೆ.
ಅದಾಗಿಯೂ ಜಿಲ್ಲೆಯಲ್ಲಿ ನಡೆಯುವ ಜಾತ್ರೆ, ಉತ್ಸವ, ಮದುವೆ ಸಮಾರಂಭಗಳಲ್ಲಿ ಸ್ವಚ್ಛತೆ ಕಾಪಾಡಲು ಅರಿವು ಮೂಡಿಸಲಾಗುತ್ತಿದೆ. ಈ ಕಾಯಿಲೆ ಮಲಿನ ನೀರು ಹಾಗೂ ಅಶುದ್ಧ ಆಹಾರದ ಮೂಲಕ ಉಂಟಾಗುತ್ತದೆ. ಹೀಗಾಗಿ, ನೈರ್ಮಲ್ಯ ಕಾಪಾಡಿಕೊಳ್ಳಲು ಅರಿವು ಮೂಡಿಸಲಾಗುತ್ತಿದೆ.
‘ಇದೊಂದೇ ರೋಗಕ್ಕೆ ಪ್ರತ್ಯೇಕವಾಗಿ ಯಾವುದೇ ಕ್ರಮ ವಹಿಸಿಲ್ಲ. ಏಕೆಂದರೆ, ಅಷ್ಟೊಂದು ಗಂಭೀರವಾದ ಯಾವುದೇ ಪ್ರಕರಣ ಕಂಡುಬಂದಿಲ್ಲ. ಮುಂಜಾಗೃತಾ ಕ್ರಮವಾಗಿ ಬೇಸಿಗೆಯಲ್ಲಿ ಕಂಡುಬರುವ ಇತರ ಸೋಂಕುಗಳ ಜತೆಗೆ ಗೀಲನ್ ಬಾ ಸಿಂಡ್ರೋಮ್ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ ಗಡೇದ ಅವರ ಹೇಳಿಕೆ.
ಜಿಬಿಎಸ್ ಹರಡಲು ಪ್ರಮುಖ ಕಾರಣ ಕ್ಯಾಂಫಿಲೊಬ್ಯಾಕ್ಟರ್ ಜೆಜುನಿ ಎನ್ನುವ ಬ್ಯಾಕ್ಟೀರಿಯಾ. ಮಹಾರಾಷ್ಟ್ರದಲ್ಲಿ ಸೋಂಕಿತರ ಪೈಕಿ ಶೇ 20 ರಿಂದ ಶೇ 30ರಷ್ಟು ಮಂದಿಯ ಮಾದರಿಗಳಲ್ಲಿ ಈ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಪ್ರತಿ ವರ್ಷವೂ ಇಂಥ ಪ್ರಕರಣಗಳು ಪತ್ತೆಯಾಗುತ್ತವೆ. ಸುಮಾರು 100 ವರ್ಷಗಳ ಹಿಂದಿನಿಂದಲೂ ಈ ಬ್ಯಾಕ್ಟೀರಿಯಾ ಪತ್ತೆಯಾಗುತ್ತಲಿದೆ. ಇದೇನು ಹೊಸ ಕಾಯಿಲೆಯಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
‘ಬೆಂಗಳೂರಿನ ನಿಮ್ಹಾನ್ಸ್‌ನ ಮನೋಜಿತ್ ದೇಬನಾಥ್ ಮತ್ತು ಮಧು ನಾಗಪ್ಪ 2014–2019ರ ನಡುವೆ 150 ಜಿಬಿಎಸ್ ರೋಗಿಗಳನ್ನು ಅಧ್ಯಯನ ಮಾಡಿದ್ದರು. ಈ ಪೈಕಿ ಶೇ 79 ಮಂದಿಗೆ ಈ ಕಾಯಿಲೆ ಹಿಂದೆಯೇ ಬಂದುಹೋಗಿದೆ’ ಎನ್ನುವುದು ತಿಳಿದುಬಂದಿತ್ತು. ರೋಗಿಗಳ ಪೈಕಿ ಶೇ 65 ಮಂದಿಯಲ್ಲಿ ಇತರೆ ಸೋಂಕುಗಳು ಕೂಡ ಕಂಡುಬಂದಿದ್ದವು.
ಕ್ಯಾಂಪಿಲೊಬ್ಯಾಕ್ಟರ್ ಜೆಜುನಿ ಎಂಬ ರೋಗಕಾರಕ ಬ್ಯಾಕ್ಟೀರಿಯಾದಿಂದ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಈ ಬ್ಯಾಕ್ಟೀರಿಯಾ ಕೋಳಿಗಳಲ್ಲಿ ಕಂಡುಬರುತ್ತದೆ. ಆಹಾರ ಮತ್ತು ನೀರಿನಿಂದ ಬರುವ ಕಾಯಿಲೆಯಾಗಿದೆ. ಜಿಲ್ಲೆಯಲ್ಲಿ ಪ್ರಕರಣ ಕಂಡುಬಂದಿಲ್ಲ.–ರಾಹುಲ್ ಶಿಂಧೆ ಸಿಇಒ ಜಿಲ್ಲಾ ಪಂಚಾಯಿತಿ
ಇದು ಅಪಾಯಕಾರಿ ಕಾಯಿಲೆ ಅಲ್ಲ. ಆದರೆ ಈ ರೋಗಕ್ಕೆ ನಿರ್ದಿಷ್ಟ ಔಷಧ ಇಲ್ಲ. ಜನ ಆದಷ್ಟು ಎಚ್ಚರಿಕೆಯಿಂದ ಇರಬೇಕು. ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ತೋರಿಸಿಕೊಳ್ಳಬೇಕು. ಯಲ್ಲಮ್ಮನಗುಡ್ಡ ಚಿಂಚಲಿ ಜಾತ್ರೆಗೆ ಬರುವ ಮಹಾರಾಷ್ಟ್ರದ ಭಕ್ತರ ಮೇಲೆ ನಿಗಾ ಇಡಲಾಗಿದೆ. ಲಕ್ಷಣಗಳು ಕಂಡುಬಂದರೆ ತಪಾಸಣೆಗೆ ಒಳಪಡಿಸಲಾಗುವುದು.–ಡಾ.ಈಶ್ವರ ಗಡಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
* ನರಮಂಡಲದ ಮೇಲೆ ದಾಳಿ ಮಾಡುವ ಕಾಯಿಲೆ ಇದು
* ಪಾದಗಳು ಮತ್ತು ಕೈಗಳು ಜೋಮು ಹಿಡಿಯುವುದು
* ಸ್ನಾಯು ದೌರ್ಬಲ್ಯ ಉಂಟಾಗಿ ಕೀಲುಗಳಲ್ಲಿ ಭಾರಿ ನೋವು
* ಎರಡರಿಂದ ನಾಲ್ಕು ವಾರಗಳಲ್ಲಿ ಭುಜ ಮತ್ತು ಕಾಲುಗಳಿಗೆ ನೋವು ಹರಡುವುದು
* ಕೈ– ಕಾಲು ಬೆರಳುಗಳ ತುದಿಗಳಲ್ಲಿ ಜುಮ್ಮೆನ್ನುವುದು ಅಥವಾ ಚುಚ್ಚುವ ಸಂವೇದನೆ
* ಮಾತನಾಡುವಾಗ ಆಹಾರ ಸೇವಿಸುವಾಗ ತೊಂದರೆ
* ತ್ವರಿತ ಹೃದಯ ಬಡಿತ ರಕ್ತದೊತ್ತಡದ ಏರಿಳಿತ
* ತೀವ್ರ ಉಸಿರಾಟದ ತೊಂದರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.