ADVERTISEMENT

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ!

45,235 ಜಾನುವಾರುಗೆ ಆಶ್ರಯ, 703 ಮೆಟ್ರಿಕ್‌ ಟನ್‌ ಮೇವು ಪೂರೈಕೆ

ಮಹಾಂತೇಶ ಜಾಂಗಟಿ
Published 16 ಆಗಸ್ಟ್ 2019, 10:51 IST
Last Updated 16 ಆಗಸ್ಟ್ 2019, 10:51 IST
ಚಿಕ್ಕೋಡಿ ತಾಲ್ಲೂಕಿನ ಕೆರೂರಿನಲ್ಲಿ ಜಾನುವಾರುಗಳಿಗೆ ಶಿಬಿರ ಆರಂಭಿಸಲಾಗಿದೆ
ಚಿಕ್ಕೋಡಿ ತಾಲ್ಲೂಕಿನ ಕೆರೂರಿನಲ್ಲಿ ಜಾನುವಾರುಗಳಿಗೆ ಶಿಬಿರ ಆರಂಭಿಸಲಾಗಿದೆ   

ಬೆಳಗಾವಿ: ಪ್ರವಾಹದಿಂದ ಬಾಧಿತವಾಗಿರುವ ಸಂತ್ರಸ್ತರ ಜಾನುವಾರುಗಳಿಗೆ ಮೇವು ಒದಗಿಸಲು ಜಿಲ್ಲಾಡಳಿತ ಹಾಗೂ ಪಶು ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಆದರೂ ಮೇವು ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಅಪಸ್ವರ ಕೇಳಿಬರುತ್ತಿದೆ.

ಮಳೆ, ಪ್ರವಾಹದಿಂದಾಗಿ ಬಣವೆಗಳು ಕೊಚ್ಚಿ ಹೋಗಿವೆ. ಹಸಿರು ಮೇವು ಕೂಡ ಜಲಾವೃತವಾಗಿದೆ. ಹೀಗಾಗಿ, ಮೇವು ಹೊಂದಿಸುವುದು ಸಮಸ್ಯೆಯಾಗಿ ಪರಿಣಮಿಸಿದೆ. ಜಾನುವಾರು ಶಿಬಿರಗಳಿಗೆ ಜಿಲ್ಲಾಡಳಿತ ಪೂರೈಸುತ್ತಿರುವ ಮೇವು ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತಾಗಿದೆ.

ಸಂತ್ರಸ್ತರ ರಕ್ಷಣೆಗೆ ತೆರೆಯಲಾಗಿರುವ ಗಂಜಿ ಕೇಂದ್ರದ ಆವರಣ ಹಾಗೂ ಸಮೀಪದ ಖಾಲಿ ಜಾಗದಲ್ಲಿ ಜಾನುವಾರುಗಳಿಗೆ (ಕೆಲವೆಡೆ ತಗಡಿನ ಶೆಡ್‌ಗಳನ್ನು ನಿರ್ಮಿಸಿ) ಆಶ್ರಯ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಪ್ರವಾಹ ಪೀಡಿತವಾಗಿರುವ ಚಿಕ್ಕೋಡಿ, ಅಥಣಿ, ಹುಕ್ಕೇರಿ, ಗೋಕಾಕ ಹಾಗೂ ಖಾನಾಪುರ ತಾಲ್ಲೂಕಿನ ವಿವಿಧೆಡೆ ಒಟ್ಟು 137 ಶಿಬಿರಗಳನ್ನು ತೆರೆಯಲಾಗಿದೆ. 45,235 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ.

ADVERTISEMENT

703 ಮೆಟ್ರಿಕ್ ಟನ್‌ ಮೇವು ವಿತರಣೆ: ‘738.502 ಮೆಟ್ರಿಕ್‌ ಟನ್‌ ಮೇವು ದಾಸ್ತಾನು ಇತ್ತು. ಅದರಲ್ಲಿ ಈವರೆಗೆ 703.497 ಮೆಟ್ರಿಕ್‌ ಟನ್‌ ಮೇವು ವಿತರಿಸಲಾಗಿದೆ. ಇನ್ನೂ 35.005 ಮೆಟ್ರಿಕ್‌ ಟನ್‌ ಇದೆ. ‌ಬೇರೆ ಬೇರೆ ಸ್ಥಳಗಳಿಂದ ಮೇವು ತರಿಸಲಾಗುತ್ತಿದೆ’ ಎಂದು ಪಶುವೈದ್ಯಕೀಯ ಇಲಾಖೆ ಪ್ರಭಾರ ಉಪನಿರ್ದೇಶಕ ಡಾ.ಜಿ.ಪಿ. ಮನಗೂಳಿ ಮಾಹಿತಿ ನೀಡಿದರು.

‘ಪ್ರತಿ ದಿನಕ್ಕೆ ಒಂದು ಜಾನುವಾರಿಗೆ 18 ಕೆ.ಜಿ. ಹಸಿ ಮೇವು ಹಾಗೂ 6 ಕೆ.ಜಿ. ಒಣ ಮೇವು ಕೊಡಲಾಗುತ್ತಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಕೆಲವು ದಿನಗಳ ಹಿಂದೆ ಮೇವು ಸಾಗಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ, ಸೂಕ್ತ ಸಮಯದಲ್ಲಿ ಮೇವು ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, 2 ದಿನಗಳಿಂದ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ವಿತರಣೆಗೆ ತೊಂದರೆಯಾಗಿಲ್ಲ’ ಎಂದು ತಿಳಿಸಿದರು.

ಶಿಬಿರಗಳಲ್ಲಿ ಒಬ್ಬ ಪಶು ವೈದ್ಯ, ಸಹಾಯಕ ಹಾಗೂ ‘ಡಿ’ ದರ್ಜೆಯ ನೌಕರನನ್ನು ನಿಯೋಜಿಸಲಾಗಿದೆ. ಜಾನುವಾರುಗಳಿಗೆ ಅಗತ್ಯ ವೈದ್ಯಕೀಯ ಸೌಕರ್ಯ ಒದಗಿಸಲಾಗುತ್ತಿದೆ.

ಸಂಘ–ಸಂಸ್ಥೆಗಳ ಸಹಕಾರ:ಕೆಲವು ಗ್ರಾಮಗಳಲ್ಲಿನ ಸಂತ್ರಸ್ತರು ಬೇರೆ ಊರಿನ ತಮ್ಮ ಸಂಬಂಧಿಕರ ಮನೆಗಳ ಆವರಣದಲ್ಲಿಯೇ ಜಾನುವಾರುಗಳನ್ನು ಕಟ್ಟಿದ್ದಾರೆ. ಶಿಬಿರಗಳಿಂದ ಮೇವುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಕೆಲವರು ತಾವಾಗೆ ಹೊಲ–ಗದ್ದೆಗಳಲ್ಲಿ ಕಟಾವು ಮಾಡಿಕೊಳ್ಳುತ್ತಿದ್ದಾರೆ. ಕೆಲವು ಸಂಘ–ಸಂಸ್ಥೆಗಳ ಸದಸ್ಯರು ಕೂಡ ನೇರವಾಗಿ ರೈತರಿಗೆ ಮೇವು ವಿತರಣೆ ಮಾಡುತ್ತಿದ್ದಾರೆ. ಔಷಧಗಳನ್ನು ಕಳುಹಿಸಿ ಕೊಡುತ್ತಿದ್ದಾರೆ.ಕೆಲ ಗ್ರಾಮಗಳಲ್ಲಿ ಯುವಕರೇ ಜಾನುವಾರುಗಳಿಗಾಗಿ ಶೆಡ್‌ಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿ ಜಾನುವಾರು ರಕ್ಷಣಾ ಕೇಂದ್ರ ತೆರೆಯಲಾಗಿತ್ತು. ಆದರೆ, ಇಲ್ಲಿ ಯಾರು ಕೂಡ ತಮ್ಮ ಜಾನುವಾರುಗಳನ್ನು ಬಿಡಲು ಮುಂದೆ ಬಂದಿಲ್ಲ. ರಸ್ತೆ ಸಂಪರ್ಕ ಕಡಿತಗೊಂಡಿರುವ ಗೋಕಾಕ ತಾಲ್ಲೂಕಿನ ಉದಗಟ್ಟಿ ಹಾಗೂ ಇನ್ನಿತರ ಗ್ರಾಮಗಳಿಗೆ ಬೋಟ್‌ ಮೂಲಕ ತೆರಳಿ ಮೇವು ವಿತರಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.