ADVERTISEMENT

ಕನ್ನಡ ವಿ.ವಿ.ಯಲ್ಲಿ ಭ್ರಷ್ಟಾಚಾರ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 2:36 IST
Last Updated 15 ಡಿಸೆಂಬರ್ 2021, 2:36 IST

ಬೆಳಗಾವಿ (ಸುವರ್ಣ ವಿಧಾನಸೌಧ): ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಸದಸ್ಯ ಡಾ. ತಳವಾರ ಸಾಬಣ್ಣ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಆಗ್ರಹಿಸಿದರು.

ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ನಾಡಿನ ಜ್ಞಾನದ ದೇಗುಲವಾಗಬೇಕಿದ್ದ ಕನ್ನಡ ವಿಶ್ವವಿದ್ಯಾಲಯ ಈಗ ಭ್ರಷ್ಟಾಚಾರದ ಕೂಪವಾಗಿದೆ. ಪ್ರಾಧ್ಯಾಪಕರ ನೇಮಕಾತಿಯಿಂದ ನಿವೃತ್ತಿ ಸೌಲಭ್ಯ ಬಿಡುಗಡೆಯವರೆಗೆ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇಷತನ ಮಂಜೂರು ಮಾಡುವುದಕ್ಕೂ ಲಂಚ ಕೇಳುತ್ತಿರುವ ಆರೋಪ ಇದೆ. ಕನ್ನಡ ವಿಶ್ವವಿದ್ಯಾಲಯ ಇಂತಹ ಸ್ಥಿತಿ ತಲುಪಿರುವುದು ದುರದೃಷ್ಟಕರ’ ಎಂದರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ನಿತ್ಯವೂ ವರದಿಗಳು ‍ಪ್ರಕಟವಾಗುತ್ತಿವೆ. ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳೇ ನೇರವಾಗಿ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಎಲ್ಲ ಅಕ್ರಮಗಳ ವಿರುದ್ಧವೂ ಉನ್ನತ
ಮಟ್ಟದ ತನಿಖೆಗೆ ಆದೇಶ ಹೊರಡಿಸಬೇಕು ಎಂದು ಸಾಬಣ್ಣ ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.