ADVERTISEMENT

ಮಂಡಕ್ಕಿಯಿಂದ ಬದುಕು ಕಟ್ಟಿಕೊಂಡರು

ಪರಶುರಾಮ ನಂದೇಶ್ವರ
Published 8 ಮೇ 2019, 19:46 IST
Last Updated 8 ಮೇ 2019, 19:46 IST
ಅಥಣಿಯ ಮಂಡಕ್ಕಿ ಘಟಕದಲ್ಲಿ ಶರಣಪ್ಪ ಗೌಡರ 
ಅಥಣಿಯ ಮಂಡಕ್ಕಿ ಘಟಕದಲ್ಲಿ ಶರಣಪ್ಪ ಗೌಡರ    

ಅಥಣಿ: ಇಲ್ಲಿನ ಸಣ್ಣ ಪ್ರಮಾಣದ ಉದ್ಯಮಿ ಶರಣಪ್ಪ ಶ್ರೀನಿವಾಸ ಗೌಡರ ಮಂಡಕ್ಕಿ ತಯಾರಿಕೆ ಹಾಗೂ ಮಾರಾಟದಿಂದ ಬದುಕು ಕಟ್ಟಿಕೊಂಡಿದ್ದಾರೆ.

30 ವರ್ಷಗಳ ಹಿಂದೆ ತಮಿಳುನಾಡಿನಿಂದ ಬಂದು ಇಲ್ಲಿಗೆ ನೆಲೆ ನಿಂತ ಅವರಿಗೆ ಮಂಡಕ್ಕಿ ತಯಾರಿಕೆ ಉದ್ಯಮ ಕೈಹಿಡಿದಿದೆ. ಕುಟುಂಬದವರೆಲ್ಲರೂ ಈ ಘಟಕದಲ್ಲಿ ಕಾರ್ಯನಿರ್ವಹಿಸುತ್ತಾರೆ. ಪಟ್ಟಣದ ಹೊರವಲಯದ ಜತ್ತ ರಸ್ತೆಯಲ್ಲಿರುವ ಬಡಕಂಬಿ ಪ್ಲಾಟ್‌ನಲ್ಲಿರುವ ಈ ಘಟಕದಲ್ಲಿ ಮಂಡಕ್ಕಿ ತಯಾರಿಸುತ್ತಾರೆ. ಅಲ್ಲಿಂದ ನಿತ್ಯ ಸರಾಸರಿ 15ರಿಂದ 20 ಅಂಗಡಿಗಳಿಗೆ ಪೂರೈಸುತ್ತಾರೆ. ಈ ಮೂಲಕ ಅವರು ಸ್ವಾವಲಂಬಿಯಾಗಿ ಹೊರಹೊಮ್ಮಿದ್ದಾರೆ.

ಪಟ್ಟಣ, ಹೋಬಳಿ ಕೇಂದ್ರಗಳೊಂದಿಗೆ ಹಳ್ಳಿಗಳಲ್ಲಿ ನಡೆಯುವ ಜಾತ್ರೋತ್ಸವಗಳ ಸಂದರ್ಭದಲ್ಲಿ ಗ್ರಾಹಕರಿಂದ ಮಂಡಕ್ಕಿಗೆ (ಚುರುಮುರಿ) ಬಹಳ ಬೇಡಿಕೆ ಇರುತ್ತದೆ. ಆಗ, ವ್ಯಾಪಾರಿಗಳಿಂದ ಶರಣಪ್ಪ ಅವರಿಗೂ ಹೆಚ್ಚಿನ ಆರ್ಡರ್‌ ಬರುತ್ತದೆ. ಇದಕ್ಕೆ ತಕ್ಕಂತೆ ಅವರು ಪೂರೈಸುವುದಕ್ಕೆ ಶ್ರಮಿಸುತ್ತಿದ್ದಾರೆ. ಶ್ರದ್ಧೆಯಿಂದ ದುಡಿದರೆ, ಸಣ್ಣ ಕೈಗಾರಿಕೆಯಿಂದಲೂ ವರಮಾನ ಕಾಣಬಹುದು ಎನ್ನುವುದನ್ನು ನಿರೂಪಿಸಿದ್ದಾರೆ.

ADVERTISEMENT

‘ಬೆಳಗಾವಿಯಿಂದ ಭತ್ತವನ್ನು ತೆಗೆದುಕೊಂಡು ಬರುವ ಅವರು, ಇಲ್ಲಿ ಮಂಡಕ್ಕಿ ತಯಾರಿಸುತ್ತಾರೆ. ಕ್ವಿಂಟಲ್ ಭತ್ತಕ್ಕೆ ₹ 2ಸಾವಿರಕ್ಕೆ ತರುತ್ತೇನೆ. 65 ಕೆ.ಜಿ.ಯ ಭತ್ತದ ಮೂಟೆಗಳು ದೊರೆಯುತ್ತವೆ. ಒಂದು ಮೂಟೆ ಭತ್ತದಿಂದ 5 ಮೂಟೆ ಚುರುಮುರಿ ತಯಾರಿಸಬಹುದು. ಒಂದು ಮೂಟೆ 115 ಸೇರು ಚುರುಮುರಿ ಹಿಡಿಯುತ್ತದೆ. ಅಂದರೆ 65 ಕೆ.ಜಿ. ಭತ್ತದಿಂದ 575 ಸೇರು ಚುರುಮುರಿ ತಯಾರಿಸಬಹುದು. ಮೂಟೆಗೆ ₹ 450ಕ್ಕೆ ಮಾರಾಟಗಾರರಿಗೆ ಮಾರುತ್ತೇನೆ. ಸಗಟು ಮಾರಾಟಗಾರರು ಸೇರಿಗೆ ₹ 5 ತೆಗೆದುಕೊಳ್ಳುತ್ತಾರೆ. ಒಂದು ಚೀಲ ಭತ್ತಕ್ಕೆ ₹ 1ಸಾವಿರದವರೆಗೆ ಆದಾಯ ಬರುತ್ತದೆ’ ಎನ್ನುತ್ತಾರೆ ಅವರು.

‘ಮಂಡಕ್ಕಿ ಗ್ರಾಮೀಣ ಪ್ರದೇಶಗಳ ಜನರ ಪ್ರಮುಖ ತಿನಿಸಾಗಿದೆ. ಮಾರುಕಟ್ಟೆಗೆ, ಸಂತೆಗೆ ಬಂದ ಬಹುತೇಕರು ಮನೆಗಳಿಗೆ ಚುರುಮುರಿ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿರುತ್ತದೆ. ಏನೇ ತಿನಿಸುಗಳು ಬಂದರೂ ಮಂಡಕ್ಕಿಗೆ ಬೇಡಿಕೆ ಇದ್ದೇ ಇದೆ. ಐದು ವರ್ಷಗಳ ಹಿಂದೆಗೆ ಹೋಲಿಸಿದರೆ, ಆಗ ಬೇಡಿಕೆಯುಹೆಚ್ಚಿನ ಪ್ರಮಾಣದಲ್ಲಿ ಇರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ ಕಡಿಮೆಯಾಗಿದೆ. ಇದರಿಂದ ಲಾಭವೂ ಕಡಿಮೆಯಾಗಿದೆ’ ಎಂದು ಅವರು ತಿಳಿಸಿದರು. ಸಂಪರ್ಕಕ್ಕೆ ಮೊ: 9483675289.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.