ADVERTISEMENT

‘ಆರೋಗ್ಯದ ಆರೈಕೆ ನಮ್ಮ ಕೈಯಲ್ಲೇ’

ಡಾ.ನಿರಂಜನಾ ಮಹಾಂತಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 12:40 IST
Last Updated 24 ಮಾರ್ಚ್ 2019, 12:40 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಕಾರ್ಯಾಗಾರವನ್ನು ಜೆಎನ್‌ಎಂಸಿ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ಹಾಗೂ ಅತಿಥಿಗಳು ಉದ್ಘಾಟಿಸಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ಕಾರ್ಯಾಗಾರವನ್ನು ಜೆಎನ್‌ಎಂಸಿ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ಹಾಗೂ ಅತಿಥಿಗಳು ಉದ್ಘಾಟಿಸಿದರು   

ಬೆಳಗಾವಿ: ‘ಆರೋಗ್ಯದ ಆರೈಕೆ ನಮ್ಮ ಕೈಯಲ್ಲೇ ಇದೆ. ಮುಂಜಾಗ್ರತೆ ವಹಿಸುವುದರಿಂದ ಅನೇಕ ಕಾಯಿಲೆಗಳಿಂದ ದೂರವಿರಬಹುದು’ ಇಲ್ಲಿನ ಜೆಎನ್‌ಎಂಸಿ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ ತಿಳಿಸಿದರು.

ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜಾನ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಆರೋಗ್ಯದಿಂದ ಜನಾರೋಗ್ಯದೆಡೆಗೆ’ ರಾಜ್ಯಮಟ್ಟದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇತ್ತೀಚೆಗೆ ಕಂಡುಬರುತ್ತಿರುವ ಅನೇಕ ಕಾಯಿಲೆಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದೇ ಪ್ರಮುಖ ಕಾರಣವಾಗಿದೆ. ಬದಲಾದ ಆಹಾರ ಕ್ರಮ, ವ್ಯಾಯಾಮರಹಿತ ಜೀವನ, ಒತ್ತಡದಿಂದಾಗಿ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆಹಾರ ಕ್ರಮ ಸರಿಯಾಗಿದ್ದು, ಮನಸ್ಸಿನಲ್ಲಿ ನೆಮ್ಮದಿ ಇದ್ದರೆ ಅನಾರೋಗ್ಯ ಸುಳಿಯುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಬದುಕನ್ನು ಕಲೆಯಾಗಿ ರೂಪಿಸಿಕೊಂಡು ಮಾನಸಿಕ ಒತ್ತಡವನ್ನು ನಿಭಾಯಿಸಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬಹುದಾಗಿದೆ’ ಎಂದು ಸಲಹೆ ನೀಡಿದರು.

ರಾಜಲಕ್ಷ್ಮಿ ಮಕ್ಕಳ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಶಶಿಕಾಂತ ಕುಲಗೋಡ ಮಾತನಾಡಿ, ‘ಹಿತ–ಮಿತವಾದ ಆಹಾರ ಹಾಗೂ ಆಯಾ ಋತುಮಾನಕ್ಕೆ ತಕ್ಕ ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಒಳಗೊಂಡ ಆಹಾರ ಕ್ರಮ ಅಳವಡಿಸಿಕೆಯು ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್.ವಿ. ಸಂಕನೂರ ಮಾತನಾಡಿ, ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಅತಿ ಕಡಿಮೆ ಅನುದಾನ ಮೀಸಲಿಡುತ್ತಿವೆ. ಇದು ಸರಿಯಲ್ಲ. ಜಿಡಿಪಿಯ ಶೇ. 5ರಷ್ಟು ಹಣವನ್ನಾದರೂ ಒದಗಿಸಬೇಕು’ ಎಂದು ಸಲಹೆ ನೀಡಿದರು.

ಬಿ.ಎಂ. ಕಂಕಣವಾಡಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಉಪನ್ಯಾಸಕ ಡಾ.ಅರುಣ ಚೌಗಲೆ, ಜೆಎನ್‌ಎಂಸಿ ಉ‍ಪನ್ಯಾಸಕ ಡಾ.ಅವಿನಾಶ ಕವಿ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕಿ ಡಾ.ಕೀರ್ತಿ ಚೌಗಲೆ ಉಪನ್ಯಾಸ ನೀಡಿದರು.

ರಾಯಚೂರು ನವೋದಯ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಪಿ.ವಿ. ಪಾಟೀಲ, ಬೇಸ್ ಕಾರ್ಯದರ್ಶಿ ರಾಜನಂದಾ ಘಾರ್ಗಿ, ವಿಜ್ಞಾನ ಪರಿಷತ್ತಿನ ಆರೋಗ್ಯ ಸಮಿತಿ ರಾಜ್ಯ ಸಂಯೋಜಕ ಕೌಶಿಕ್ ಪಿ.ಎಸ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.