ADVERTISEMENT

ಆರೋಗ್ಯ ಸಂಪತ್ತು ದೊಡ್ಡದು: ಸಿದ್ದೇಶ್ವರ ಶ್ರೀ

ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 13:49 IST
Last Updated 2 ಜೂನ್ 2019, 13:49 IST
ಅಥಣಿಯಲ್ಲಿ ಭಾನುವಾರ ನಡೆದ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು
ಅಥಣಿಯಲ್ಲಿ ಭಾನುವಾರ ನಡೆದ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು   

ಅಥಣಿ: ‘ಜಗತ್ತಿನಲ್ಲಿ ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಶ್ರೇಷ್ಠ ಮತ್ತು ದೊಡ್ಡದು’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜಗತ್ತಿನ ಎಲ್ಲ ಸಂಪತ್ತನ್ನೂ ಒಂದಡೆ ಹಾಕಿ, ಇನ್ನೊಂದೆಡೆ ಆರೋಗ್ಯ ಸಂಪತ್ತು ಇಟ್ಟರೆ, ಆರೋಗ್ಯವೇ ಹೆಚ್ಚು ತೂಗುತ್ತದೆ’ ಎಂದು ವ್ಯಾಖ್ಯಾನಿಸಿದರು.

ADVERTISEMENT

‘ವೈದ್ಯರಾದವರು 3 ಗುಣಗಳನ್ನು ಅಳವಡಿಸಿಕೊಂಡಿರಬೇಕು. ಒಂದು ರೋಗಿಯನ್ನು ಕಂಡಾಗ ಮುಗುಳುನಗೆಯಿಂದ ಮಾತನಾಡುವುದು. 2ನೇಯದು ರೋಗಿ ಹೇಳುವ ಎಲ್ಲ ಸಮಸ್ಯೆಗಳನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳುವುದು ಹಾಗೂ 3ನೇಯದು ರೋಗಿಗೆ ಆರೋಗ್ಯ ಸುಧಾರಣೆಯ ಬಗ್ಗೆ ಭರವಸೆ ನೀಡುತ್ತಲೇ ಇರುವುದು’ ಎಂದು ತಿಳಿಸಿದರು.

‘ನಮ್ಮೊಂದಿಗೆ ಇರುವ ನಿಸರ್ಗವನ್ನು ನಾವೆಲ್ಲರೂ ಅನುಭವಿಸಬೇಕು. ಆದರೆ, ಇಂದಿನ ಸಂಕೀರ್ಣ ಯುಗದಲ್ಲಿ ಸ್ವಾರ್ಥದ ಕಡೆಗೆ ಒಲವು ಹೆಚ್ಚಾಗಿ ನಮ್ಮ ಆರೋಗ್ಯದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದೇವೆ. ರೋಗಗಳು ಮತ್ತು ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇವರು ಮತ್ತು ವೈದ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ’ ಎಂದು ಬಣ್ಣಿಸಿದ ಅವರು, ‘ಅಸ್ಪತ್ರೆಗಳು ದೇವಾಲಯಗಳಿದ್ದಂತೆ. ಇಲ್ಲಿ ರೋಗಕ್ಕೆ ಮಾತ್ರವೇ ಚಿಕಿತ್ಸೆ ನೀಡಬಾರದು. ಆತನಲ್ಲಿರುವ ಮಾನಸಿಕತೆಗೆ ಕೂಡ ಚಿಕಿತ್ಸೆ ಕೊಟ್ಟು, ಮಾನಸಿಕವಾಗಿ ಸದೃಢ ವ್ಯಕ್ತಿಯನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ಒಬ್ಬ ಹಿರಿಯ, ಒಬ್ಬ ಅನುಭಾವಿ, ಒಬ್ಬ ಶಿಕ್ಷಕ, ಒಬ್ಬ ವೈದ್ಯ ಹಾಗೂ ಸಹೃದಯಿ ಜನರಿದ್ದರೆ ಅದು ಆದರ್ಶ ಗ್ರಾಮವಾಗುತ್ತದೆ. ವೈದ್ಯರಿಗೆ ಹಣ ಗಳಿಸುವುದೇ ಗುರಿಯಾಗಬಾರದು. ಕಷ್ಟದಲ್ಲಿ ಇದ್ದವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ವೈದ್ಯರೆಂದರೆ ದೇವರು ಎಂಬ ಭಾವನೆ ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ‘‍ಪರ್ಸಂಟೇಜ್ ವ್ಯವಸ್ಥೆ ವೈದ್ಯಕೀಯ ಕ್ಷೇತ್ರವನ್ನೂ ಪ್ರವೇಶಿಸಿರುವುದು ಆತಂಕ ಮೂಡಿಸಿದೆ. ಇದರಿಂದ, ಭ್ರಷ್ಟಾಚಾರವೂ ಬಂದಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ. ಕೆಲವರು ಈ ವ್ಯವಸ್ಥೆಗೆ ಅಂಟಿಕೊಂಡಿದ್ದಾರೆ. ಇದರಿಂದ ಮಾನವಿಯತೆ, ಸೇವೆ ಕಡಿಮೆ ಆಗುತ್ತಿದೆ. ಎಲ್ಲಿ ವ್ಯಾಪಾರಿ ಮನೋಭಾವ ಬರುತ್ತದೆಯೋ ಅಲ್ಲಿ, ಮಾನವೀಯ ಮೌಲ್ಯಗಳು ಕುಸಿಯುತ್ತವೆ’ ಎಂದು ಹೇಳಿದರು.

‘ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸಾವಯವ ಕೃಷಿಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ‘ಆರೋಗ್ಯ ಕಾಪಾಡಿಕೊಳ್ಳಲು ಅಧ್ಯಾತ್ಮ ಪ್ರಮುಖ ಪಾತ್ ರವಹಿಸುತ್ತದೆ. ಹೀಗಾಗಿ, ಅಧ್ಯಾತ್ಮವನ್ನು ನಾವು ಕಡೆಗಣಿಸಬಾರದು’ ಎಂದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ, ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿದರು. ಮಹಾದೇವ ಮಹಾರಾಜ ಭೂಕೈಲಾಸ ಮಂದಿರದ ಗುರುಪಾದ ಸ್ವಾಮೀಜಿ, ಆತ್ಮಾರಾಮ ಸ್ವಾಮೀಜಿ ಇದ್ದರು.

ಡಾ.ಗುರುಪುತ್ರ ಸಂ. ಪಾಟೀಲ ಸ್ವಾಗತಿಸಿದರು. ಅಶೋಕ ಹಚಡದ ನಿರೂಪಿಸಿದರು. ಡಾ.ವಿದ್ಯಾಶ್ರೀ ಗು.ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.