ಗೋಕಾಕ: ನಗರದಲ್ಲಿ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆ ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನರಿಗೆ ತಂಪೆರೆಯಿತು.
ಇಲ್ಲಿನ ಬಸ್ ನಿಲ್ದಾಣ ರಸ್ತೆಯಲ್ಲಿ ಅರಣ್ಯ ಇಲಾಖೆ ಆವರಣದ ಬದಿ ರಸ್ತೆ ನಿರ್ಮಾಣಕ್ಕೆ ನಗರಸಭೆ ಮುಂದಾಗಿತ್ತು. ಆದರೆ, ಕಾಮಗಾರಿ ಸ್ಥಳದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದ್ದು, ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಂಡಿದೆ.
ಮುಖ್ಯರಸ್ತೆಗೆ ಹೊಂದಿಕೊಂಡು ನಿರ್ಮಿಸಿದ ಚರಂಡಿ ಮತ್ತು ಅದರ ಮೇಲಿನ ಪಾದಚಾರಿ ಮಾರ್ಗ ನೆಲಮಟ್ಟಕ್ಕಿಂತ ಎತ್ತರದಲ್ಲಿವೆ. ಹಾಗಾಗಿ ರಸ್ತೆಯಲ್ಲಿ ಸಂಗ್ರಹವಾದ ಮಳೆನೀರು ಸರಾಗವಾಗಿ ಹರಿದುಹೋಗಲಿಲ್ಲ. ಅಲ್ಲದೆ, ಬಹುತೇಕ ರಸ್ತೆಗಳಲ್ಲಿ ಹೆಚ್ಚಿನ ಮಳೆನೀರು ಸಂಗ್ರಹವಾಗಿ ಸವಾರರು ಮತ್ತು ಪಾದಚಾರಿಗಳು ತೊಂದರೆ ಅನುಭವಿಸಿದರು.
ಬೆಳಗಾವಿ ವರದಿ: ನಗರದಲ್ಲಿ ಎರಡು ತಾಸಿಗೂ ಅಧಿಕ ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನದಿಂದ ಮೋಡ ಕವಿದಿತ್ತು. ಸಂಜೆ ಮಳೆಯಾಗಿದ್ದರಿಂದ ವಾತಾವರಣ ತಂಪೇರಿತು. ಮಾರುಕಟ್ಟೆಯಲ್ಲಿ ವ್ಯಾಪಾರ–ವಹಿವಾಟಿಗೆ ತೊಡಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.