ADVERTISEMENT

ಬೆಳಗಾವಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 12:50 IST
Last Updated 13 ಅಕ್ಟೋಬರ್ 2019, 12:50 IST
ಬೆಳಗಾವಿ ಜಿಲ್ಲೆ ಬೈಲಹೊಂಗಲ ಸಮೀಪದ ಚಿಕ್ಕೊಪ್ಪ-ಕಾರಿಮನಿ ಗ್ರಾಮದ ಸಂಪರ್ಕ ಸೇತುವೆ ಮಳೆಯಿಂದಾಗಿ ಕುಸಿದಿದೆ
ಬೆಳಗಾವಿ ಜಿಲ್ಲೆ ಬೈಲಹೊಂಗಲ ಸಮೀಪದ ಚಿಕ್ಕೊಪ್ಪ-ಕಾರಿಮನಿ ಗ್ರಾಮದ ಸಂಪರ್ಕ ಸೇತುವೆ ಮಳೆಯಿಂದಾಗಿ ಕುಸಿದಿದೆ   

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಿಗ್ಗೆವರೆಗೆ ಗುಡುಗುಸಹಿತ ಜೋರು ಮಳೆಯಾಗಿದೆ.

ಬೈಲಹೊಂಗಲ, ಸವದತ್ತಿ, ಖಾನಾಪುರ ಹಾಗೂ ನಗರವೂ ಸೇರಿದಂತೆ ಬೆಳಗಾವಿ ತಾಲ್ಲೂಕಿನ ಅಲ್ಲಲ್ಲಿ ಮಳೆ ಬಿದ್ದಿದೆ. ಬೈಲಹೊಂಗಲ ಸಮೀಪದ ಚಿಕ್ಕೊಪ್ಪ-ಕಾರಿಮನಿ ಗ್ರಾಮದ ಸಂಪರ್ಕ ಸೇತುವೆ ಮಳೆಯಿಂದಾಗಿ ಕುಸಿದಿದೆ.

ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿರುವುದರಿಂದ ಸವದತ್ತಿ ತಾಲ್ಲೂಕಿನ ಬಳಿ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದೆ. ಪರಿಣಾಮ, ಇನಾಮಹೊಂಗಲ ಬಳಿಯ ಸವದತ್ತಿ-ಧಾರವಾಡ ಮಾರ್ಗದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ಭಾನುವಾರ ಬೆಳಗ್ಗೆಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ADVERTISEMENT

ಆಗಸ್ಟ್ ಮೊದಲ ವಾರದಲ್ಲಿ ಧಾರಾಕಾರ ಮಳೆಯಿಂದಾಗಿ ಸವದತ್ತಿ-ಧಾರವಾಡ ಮಾರ್ಗದ ಮುಖ್ಯ ಸೇತುವೆ ಕುಸಿದಿತ್ತು. ಈವರೆಗೂ ದುರಸ್ತಿಯಾಗಿಲ್ಲ. ಅದರ ಪಕ್ಕದಲ್ಲೇ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿದ್ದವು. ಈಗ ಇದೂ ಮುಳುಗಿರುವುದರಂದ ಸಾರ್ವಜನಿಕರು ಪರದಾಡುವಂತಾಗಿದೆ.

ಯಲ್ಲಮ್ಮನಗುಡ್ಡದಲ್ಲಿ ‘ಶೀಗಿ ಹುಣ್ಣಿಮೆ’ ಅಂಗವಾಗಿ ಜಾತ್ರೆ ನಡೆಯುತ್ತಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು, ಗುಡ್ಡಕ್ಕೆ ಬರುತ್ತಿದ್ದಾರೆ. ಧಾರವಾಡದಿಂದ ಸವದತ್ತಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬಂದ್ ಆಗಿರುವುದರಿಂದ, ವಾಹನಗಳು ಇನಾಮಹೊಂಗಲ– ಉಪ್ಪಿನ ಬೆಟಗೇರಿ ಮಾರ್ಗವಾಗಿ ಧಾರವಾಡಕ್ಕೆ ಹೋಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.