ADVERTISEMENT

ಬೆಳಗಾವಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ; 317 ಮನೆಗಳ ಕುಸಿತ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 7:12 IST
Last Updated 12 ಜುಲೈ 2022, 7:12 IST
ಮಳೆಯಿಂದಾಗಿ ಚಿಕ್ಕೋಡಿಯಲ್ಲಿ ಕುಸಿದ ಮನೆಯ ಗೋಡೆ
ಮಳೆಯಿಂದಾಗಿ ಚಿಕ್ಕೋಡಿಯಲ್ಲಿ ಕುಸಿದ ಮನೆಯ ಗೋಡೆ   

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಈವರೆಗೆ 317 ಮನೆಗಳು ಕುಸಿದಿವೆ.

ಚಿಕ್ಕೋಡಿ ತಾಲ್ಲೂಕಿನಲ್ಲಿ 82, ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ 39, ರಾಮದುರ್ಗ ತಾಲ್ಲೂಕಿನಲ್ಲಿ 43, ಸವದತ್ತಿ 35 ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ 19 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

ಉಳಿದಂತೆ, ಮೂಡಲಗಿ ತಾಲ್ಲೂಕು 22, ಕಾಗವಾಡ 24, ಬೈಲಹೊಂಗಲ 19, ಹುಕ್ಕೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 14 ಮನೆಗಳ ಗೋಡೆಗಳು ಕುಸಿದಿವೆ.

ADVERTISEMENT

ನಿರಂತರ ಸುರಿಯುತ್ತಿರುವ ಮಳೆಯಿಂದಯಾಗಿ ಹಳ್ಳಿಗಳಲ್ಲಿನ ಕಲ್ಲು- ಮಣ್ಣಿನ ಮನೆಗಳ ಗೋಡೆ ಕುಸಿಯುವುದು ಮುಂದುವರಿದಿದೆ.

ಮುಳುಗಡೆ ಸೇತುವೆ ಮೇಲೇ ಸಂಚಾರ ಬಂದ್‌!

ಗೋಕಾಕ ಶಿಂಗ್ಲಾಪುರ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ಪೊಲೀಸರು ಸಂಚಾರ ಬಂದ್ ಮಾಡಿದರು. ಅಪಾಯವನ್ನೂ ಲೆಕ್ಕಿಸದೇ ಸೇತುವೆ ಮೇಲೆ ವಾಹನ ಓಡಾಡುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬ್ಯಾರಿಕೇಡ್ ಇಟ್ಟು ಸಂಚಾರ ಬಂದ್ ಮಾಡಿದರು.ಗೋಕಾಕ ಹೊರವಲಯದಲ್ಲಿರುವ ಈ ಸೇತುವೆ ಮೇಲೆ ಅರ್ಧ ಅಡಿಯಷ್ಟು ನೀರು ಹರಿಯುತ್ತಿದೆ.

ಗೋಕಾಕ ಶಿಂಗ್ಲಾಪುರ ಸೇತುವೆಯಲ್ಲಿ ಸಂಚಾರವನ್ನು ಬಂದ್‌ ಮಾಡಿದ ಪೊಲೀಸರು

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಈಗಾಗಲೇ ಚಿಕ್ಕೋಡಿ ತಾಲ್ಲೂಕಿನ ಐದು ಹಾಗೂ ನಿಪ್ಪಾಣಿ ತಾಲ್ಲೂಕಿನ ಎರಡು ಸೇತುವೆಗಳ ಸಂಚಾರ ಬಂದ್ ಆಗಿದೆ.ಸೋಮವಾರ ತಡರಾತ್ರಿಯಿಂದ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಒಳಹರಿವೂ ಮತ್ತಷ್ಟು ಹೆಚ್ಚಳವಾಗಿದೆ.

ಇದರಿಂದ ಗೋಕಾಕ- ಶಿಂಗ್ಲಾಪುರ ಮಧ್ಯದ ಕೆಳಹಂತದ ಸೇತುವೆ ಮುಳುಗಡೆಯಾಗಿದೆ. ಆದರೂ ಜನ ಹಾಗೂ ವಾಹನ ಓಡಾಟ ಮುಂದುವರಿದಿತ್ತು.ಅಪಾಯವನ್ನೂ ಲೆಕ್ಕಿಸದೆ ಬೈಕ್, ಕಾರ್, ಜೀಪ್, ಬಸ್ಸುಗಳ ಸಂಚಾರ ನಡೆದಿತ್ತು.

ಮತ್ತೆ ಕೆಲವರು ಮುಳುಗಡೆ ಆದ ಸೇತುವೆ ಮೇಲೆಯೇ ವಾಹನ ನಿಲ್ಲಿಸಿ ತೊಳೆಯುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.