ADVERTISEMENT

ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ: ಬೆಳಗಾವಿ ನದಿಗಳ ನೀರಿನ ಮಟ್ಟ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 13:25 IST
Last Updated 11 ಆಗಸ್ಟ್ 2022, 13:25 IST
ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿಯ ಸುಗಂಧಾದೇವಿ ದೇವಸ್ಥಾನ ಜಲಾವೃತವಾಗಿರುವುದು
ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿಯ ಸುಗಂಧಾದೇವಿ ದೇವಸ್ಥಾನ ಜಲಾವೃತವಾಗಿರುವುದು   

ಬೆಳಗಾವಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಗುರುವಾರವೂ ವರುಣನ ಅಬ್ಬರ ಮುಂದುವರಿದಿದ್ದು, ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಅದರ ಉಪನದಿಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿ ಗ್ರಾಮದ ಸುಗಂಧಾದೇವಿ ದೇವಸ್ಥಾನ ಮುಳುಗಡೆಯಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1,20,375 ಕ್ಯೂಸೆಕ್‌, ದೂಧಗಂಗಾ ನದಿಯಿಂದ 29,568 ಕ್ಯೂಸೆಕ್‌ ಸೇರಿ 1,49,943 ಕ್ಯೂಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಹರಿದುಬರುತ್ತಿದೆ. ಈ ಪ್ರಮಾಣ 2.50 ಲಕ್ಷ ಕ್ಯುಸೆಕ್‌ಗೆ ಏರಿಕೆಯಾದರೆ ಕೃಷ್ಣಾ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಲಿದೆ.

105.25 ಟಿಎಂಸಿ ಅಡಿ ನೀರು ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ ಸದ್ಯ 83.14 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಅಲ್ಲಿಂದ ಇನ್ನೂ ಬಿಡುಗಡೆಗೊಳಿಸುತ್ತಿಲ್ಲ. ಸದ್ಯ ಮಳೆ ನೀರಿನ ಹರಿವು ಮಾತ್ರ ಇದೆ.

ADVERTISEMENT

‘ಸದ್ಯ ಪ್ರವಾಹ ಪರಿಸ್ಥಿತಿಯಿಲ್ಲ. ಆದರೂ, ಪ್ರವಾಹ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ನದಿಪಾತ್ರದ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದ್ದು, ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯ ಭರ್ತಿಗೆ ನಾಲ್ಕೇ ಅಡಿ ಬಾಕಿ ಇದೆ. ಗುರುವಾರ ಸಂಜೆಯಿಂದ 3,000 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ.

ಉಳಿದಂತೆ, ಬೆಳಗಾವಿ, ಹಿರೇಬಾಗೇವಾಡಿ, ನಿಪ್ಪಾಣಿ, ಎಂ.ಕೆ.ಹುಬ್ಬಳ್ಳಿಯಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.