ADVERTISEMENT

ಬೆಳಗಾವಿ: ಪರಿಹಾರ ಮೊತ್ತ ಹೆಚ್ಚಿಸಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 13:18 IST
Last Updated 3 ಡಿಸೆಂಬರ್ 2021, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಇತ್ತೀಚಿಗೆ ಸುರಿದ ಅಕಾಲಿಕ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತ ಜಂಟಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ‌ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಸೂಚಿಸಿದರು.

ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕುಗಳ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಅವರು ಬೆಳೆ ಹಾನಿಯನ್ನು ಪರಿಶೀಲಿಸಿದರು.

‘ರೈತರು ಬೆಳೆ ಹಾನಿ ಕುರಿತು ವಿಮಾ ಕಂಪನಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ತಕ್ಷಣವೇ ಮಾಹಿತಿ ನೀಡಬೇಕು.‌ 72 ಗಂಟೆಗಳ ಒಳಗೆ ವಿಮಾ ಕಂಪನಿಗೆ ಮಾಹಿತಿ ನೀಡಿ ಪರಿಹಾರ ಬಿಡುಗಡೆಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿದರೆ ಕೃಷಿ ಮತ್ತು ಕಂದಾಯ ಅಧಿಕಾರಿಗಳ ಜೊತೆ ಪರಿಶೀಲನೆ ಕೈಗೊಂಡು ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಉಪ ನಿರ್ದೇಶಕ ಎಚ್.ಡಿ. ಕೋಳೆಕರ, ‘ಇತ್ತೀಚಿನ ಅಕಾಲಿಕ ಮಳೆಯಿಂದ ಪ್ರಾಥಮಿಕ ಮಾಹಿತಿ ಪ್ರಕಾರ ಅಂದಾಜು 15ಸಾವಿರ ಹೆಕ್ಟೇರ್ ಬೆಳೆಹಾನಿ ವರದಿಯಾಗಿದೆ’ ಎಂದರು.

‘ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ ₹ 6,800 ಪರಿಹಾರ ನಿಗದಿಪಡಿಸಲಾಗಿದೆ. ಇದು ಸಾಕಾಗುವುದಿಲ್ಲ; ಹೆಚ್ಚಿನ ಪರಿಹಾರ ನೀಡಬೇಕು’ ಎಂದು ರೈತರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.