ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬಿಟ್ಟೂ ಬಿಡದೇ ಮಳೆ ಬೀಳುತ್ತಿರುವುದರಿಂದ ಕೃಷ್ಣಾ ಹಾಗೂ ಉಪ ನದಿಗಳ ನೀರಿನ ಮಟ್ಟದಲ್ಲಿ ಕ್ಷಣದಿಂದ ಕ್ಷಣಕ್ಕೆ ಏರಿಕೆ ಕಂಡು ಬರುತ್ತಿದೆ.
ಮಹಾರಾಷ್ಟ್ರದ ಕೊಯ್ನಾದಲ್ಲಿ 8.5 ಸೆ.ಮೀ, ವಾರಣದಲ್ಲಿ 6.6 ಸೆ.ಮೀ, ಕಾಳಮ್ಮವಾಡಿಯಲ್ಲಿ 9.4 ಸೆ.ಮೀ, ಮಹಾಬಳೇಶ್ವರದಲ್ಲಿ 9.5 ಸೆ.ಮೀ, ನವಜಾದಲ್ಲಿ 10 ಸೆ.ಮೀ, ರಾಧಾನಗರಿಯಲ್ಲಿ 11.9 ಸೆ.ಮೀ, ಕೊಲ್ಹಾಪುರದಲ್ಲಿ 4.2 ಸೆ.ಮೀ, ಸಾಂಗಲಿಯಲ್ಲಿ 0.8 ಸೆ.ಮೀ ಮಳೆಯು ಶನಿವಾರ ದಾಖಲಾಗಿದೆ.
ಕೊಲ್ಹಾಪುರ ಜಿಲ್ಲೆಯಲ್ಲಿ ರಾಜಾಪೂರೆ ಬ್ಯಾರೇಜಿನಲ್ಲಿ 62,208 ಕ್ಯುಸೆಕ್ ಹೊರ ಹರಿವು ಇದ್ದು, ತಾಲ್ಲೂಕಿನ ಕಲ್ಲೋಳ ಬಳಿಯಲ್ಲಿ ದೂಧಗಂಗಾ ನದಿಯ ಹೊರ ಹರಿವು 19,000 ಕ್ಯುಸೆಕ್ ನಷ್ಟಿದೆ. ಕಲ್ಲೋಳ-ಯಡೂರು ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 81,208 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜ್ ನಲ್ಲಿ 61,130 ಕ್ಯುಸೆಕ್ ಇದ್ದು, ಹೊರ ಹರಿವು 58,066 ಕ್ಯುಸೆಕ್ ಹೊರ ಹರಿವು ಇದೆ. ಹೀಗಾಗಿ ಬ್ಯಾರೇಜ್‌ನಲ್ಲಿ 2.62 ಟಿಎಂಸಿ ಅಡಿ ನೀರು ಸಂಗ್ರಹವಿದೆ.
ಕೃಷ್ಣಾ ನದಿ ತೀರದಲ್ಲಿರುವ ಕಲ್ಲೋಳ ಬಳಿಯ ದತ್ತಾತ್ರೇಯ ಮಂದಿರ, ದೂಧಗಂಗಾ ನದಿ ತೀರದಲ್ಲಿಯ ಯಕ್ಸಂಬಾ ಪಟ್ಟಣದ ಮುಲ್ಲಾನ್ಕಿ ತೋಟದ ವಸತಿ ಪ್ರದೇಶದಲ್ಲಿಯ ದರ್ಗಾ, ಹೊಲ ಗದ್ದೆಗಳಿಗೂ ಕೂಡ ನೀರು ನುಗ್ಗುತ್ತಲಿದೆ.
ತೋಟದ ವಸತಿ ಪ್ರದೇಶದಲ್ಲಿಯ ಜನರು ನದಿಗಳಿಗೆ ಇಳಿಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ, ಚಿಕ್ಕೋಡಿ ತಹಶೀಲ್ದಾರ್ ಚಿದಂಬರ ಕುಲಕರ್ಣಿ ಸೇರಿದಂತೆ ಹಲವು ಅಧಿಕಾರಿಗಳು ನದಿ ತೀರದ ಜನರಿಗೆ ಮುನ್ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.