ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ನಿಪ್ಪಾಣಿ-ಮುಧೋಳ ಹಾಗೂ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ಬದಿಯಲ್ಲಿ ಹೊಂದಿಕೊಂಡು ತ್ಯಾಜ್ಯವನ್ನು ಸುರಿದು ಹೋಗುತ್ತಿರುವುದರಿಂದ ವಾಹನ ಸವಾರರು ಹಾಗೂ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವ ಸಾರ್ವಜನಿಕರು ಪರದಾಡುವಂತಾಗಿದೆ. ಹೆದ್ದಾರಿ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ಸ್ಥಳದಲ್ಲಿಯೇ ತ್ಯಾಜ್ಯ ಹಾಕಿದ್ದರಿಂದ ನೀರು ನಿಂತು ರಸ್ತೆ ಕೆಲವೇ ದಿನಗಳಲ್ಲಿ ಹಾಳಾಗುವ ಸಾಧ್ಯತೆ ಇದೆ.
ಪಟ್ಟಣದ ಹೊರವಲಯದ ನಾಲ್ಕೂ ಕಡೆಗಳಲ್ಲಿ ರಸ್ತೆಗೆ ಹೊಂದಿಕೊಂಡಂತೆ ತ್ಯಾಜ್ಯದ ಗುಡ್ಡೆಯನ್ನು ಹಾಕುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಕಳೆದ ಒಂದು ತಿಂಗಳಿನಿಂದ ಗುರುವಾರ ಪೇಟೆಯ ಅತಿಕ್ರಮಣ ತೆರವಿನ ಬಳಿಕ ಕಲ್ಲು ಮಣ್ಣಿನ ಗುಡ್ಡೆಗಳನ್ನು ಕಬ್ಬೂರು ರಸ್ತೆಗೆ ಹೊಂದಿಕೊಂಡ ಟೆನ್ನಿಸ್ ಕೋರ್ಟ್ ಬಳಿಯಲ್ಲಿ ಕಾಣಬಹುದಾಗಿದೆ. ರಸ್ತೆಗೆ ಹೊಂದಿಕೊಂಡೇ ಕಲ್ಲು ಮಣ್ಣಿನ ಗುಡ್ಡೆಗಳನ್ನು ಹಾಕಿದ್ದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡಬೇಕಿದೆ.
ಇನ್ನು ಕೆಲವೊಂದು ಕಡೆಗೆ ಕೊಳೆತ ಆಹಾರ ಪದಾರ್ಥಗಳು, ಕೋಳಿ ಮಾಂಸದ ಉಳಿಕೆ, ಮಕ್ಕಳಿಗೆ ಹಾಕುವ ಪ್ಯಾಂಪರ್ಸ್, ತೆಂಗಿನ ಚಿಪ್ಪು ಮುಂತಾದವುಗಳನ್ನು ರಸ್ತೆ ಬದಿಯಲ್ಲಿ ಹಾಕಲಾಗುತ್ತಿದೆ. ಕೆಲವು ಕಡೆಗೆ ಸತ್ತ ಪ್ರಾಣಿಗಳ ಕಳೆಬರ, ಇನ್ನು ಕೆಲವು ಕಡೆಗೆ ಮೃತರಾದವರ ಅಳಿದುಳಿದ ಹಾಸಿಗೆ, ಹೊದಿಕೆ, ಗಾದಿ, ಕಸ ಮುಂತಾದವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ರಸ್ತೆ ಬದಿಯಲ್ಲಿ ಬಿಸಾಕಲಾಗುತ್ತಿದೆ.
ಹೀಗಾಗಿ ಪಟ್ಟಣಕ್ಕೆ ಆಗಮಿಸುವವರಿಗೆ ನಾಲ್ಕೂ ದಿಕ್ಕುಗಳಲ್ಲಿ ತ್ಯಾಜ್ಯದಿಂದ ದುರ್ನಾತ ಬೀರುತ್ತಿದ್ದು, ಪ್ರಯಾಣಿಕರು, ಸವಾರರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಟೆನ್ನಿಸ್ ಕೋರ್ಟ್ ಬಳಿಯಲ್ಲಿ ಪ್ರಾಣಿಯೊಂದರ ಕಳೆಬರವನ್ನು ಯಾರೋ ಎಸೆದು ಹೋಗಿದ್ದರಿಂದ ಅಲ್ಲಿ ದುರ್ನಾತದಿಂದ ಜನ ಮೂಗಯ ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ಮಾರ್ಗದಲ್ಲಿ ಸಂಚರಿಸುವವರಿಗೆ ಕಳೆದೊಂದು ವಾರದಿಂದ ನಿತ್ಯ ನರಕ ದರ್ಶನವಾಗುತ್ತಿದೆ.
ಪಟ್ಟಣದ ಸುತ್ತಮುತ್ತಲೂ ಇರುವ ಬೆಟ್ಟ ಗುಡ್ಡದ ಪ್ರದೇಶದ ಬಯಲು ಜಾಗೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಕುಡಿದ ಮದ್ಯದ ಬಾಟಲಿಗಳನ್ನು ರಸ್ತೆ ಬದಿಯಲ್ಲಿಯೇ ಎಸೆದು ಹೋಗುತ್ತಾರೆ. ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ತೆರಳಿದ ಸಾರ್ವಜನಿಕರು ಗಾಜಿನ ಚೂರುಗಳು, ಮದ್ಯದ ಪಾಕಿಟ್ ಎಲ್ಲೆಂದರಲ್ಲಿ ಬಿದ್ದಿದ್ದರಿಂದ ಯೋಗಾಸನ ಮಾಡಲು ಪರದಾಡುವಂತಾಗಿದೆ.
ಇದೀಗ ಮಳೆಗಾಲವಾಗಿದ್ದರಿಂದ ಹೆದ್ದಾರಿ ಬದಿಯಲ್ಲಿ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಪಟ್ಟಣದ ನಾಲ್ಕೂ ಕಡೆಗೆ ರಸ್ತೆ ಬದಿಯ ತ್ಯಾಜ್ಯವನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಬೇಕಿದೆ. ಅಲ್ಲದೇ, ರಸ್ತೆ ಬದಿಯಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಬೇಕಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಲ್ಲದೇ ರಸ್ತೆ ಬದಿಯಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಬೇಕಿದೆ.
ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಹೆದ್ದಾರಿ ಬದಿಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವುದು ಅವ್ಯಾಹತವಾಗಿದೆ. ಸಂಬಂಧಿಸಿದವರು ಇದಕ್ಕೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ.– ಹೌಸಾಬಾಯಿ ದಾನನ್ನವರ, ಸ್ಥಳೀಯರು
ಚಿಕ್ಕೋಡಿಗೆ ಆಗಮಿಸುವ ಜನರಿಗೆ ದುರ್ನಾತ ದರ್ಶನವಾಗುತ್ತಿದ್ದು ಟೆನ್ನಿಸ್ ಕೋರ್ಟ್ ಬಳಿಯಲ್ಲಿ ಕಲ್ಲು ಗುಡ್ಡೆ ಹಾಕಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕೂಡಲೇ ಇದನ್ನು ತೆರವುಗೊಳಿಸಬೇಕು.– ಕಾಜಲ್ ಕದಂ, ಪ್ರಯಾಣಿಕರು
ಪಟ್ಟಣದ ಹೊರವಲಯದ ಕಬ್ಬೂರು ರಸ್ತೆಗೆ ಹೊಂದಿಕೊಂಡಂತೆ ಕಲ್ಲು ಮಣ್ಣಿನ ತ್ಯಾಜ್ಯ ಹಾಕಿದ್ದು ಗಮನಕ್ಕೆ ಬಂದಿದೆ. ಕೂಡಲೇ ಅದನ್ನು ತೆರವುಗೊಳಿಸಲಾಗುವುದು. ಪರಿಸರ ಶುಚಿತ್ವಕ್ಕೆ ಆದ್ಯತ ನೀಡಲಾಗುವುದು.– ವೆಂಕಟೇಶ ನಾಗನೂರ, ಮುಖ್ಯಾಧಿಕಾರಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.