ADVERTISEMENT

ಬೆಳಗಾವಿಯಲ್ಲಿ ಮುಸ್ಲಿಂ ವ್ಯಕ್ತಿಯ ಅಂಗಡಿ ಮೇಲೆ ಹಿಂದೂ ಯುವಕರ ದಾಂದಲೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 8:50 IST
Last Updated 19 ಅಕ್ಟೋಬರ್ 2021, 8:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಹೊರವಲಯದ ಯಮನಾಪುರ ಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯ ಕೋಳಿಮಾಂಸದ ಅಂಗಡಿ ಮೇಲೆ ಹಿಂದೂ ಯುವಕರ ಗುಂಪೊಂದು ದಾಳಿ ಮಾಡಿ, ಮಾಲೀಕರ ಮೇಲೆ ಹಲ್ಲೆ ನಡೆಸಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಅಲ್ಲಿನ ಭರಮದೇವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷ‍ ಪೂಜೆ ನೆರವೇರಿಸಲಾಗುತ್ತಿತ್ತು. ಈ ವೇಳೆ, ಸಮೀಪದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಗಲಾಟೆ ಶುರು ಮಾಡಿದ್ದಾರೆ. ಮಾಲೀಕ ಮತ್ತು ಸಹಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಂಗಡಿ ಬಾಗಿಲು ಹಾಕಿದ ನಂತರ, ಬ್ಯಾನರ್ ಹರಿದು ಬೆಂಕಿ ಹಚ್ಚಿದ್ದಾರೆ. ಆತಂಕದ ವಾತಾವರಣ ಉಂಟು ಮಾಡಿದ್ದರು’ ಎಂದು ಆರೋಪಿಸಲಾಗಿದೆ.

‘ಪ್ರಸಾದ ಹಂಚುವ ಸಮಯದಲ್ಲಿ ಮಾಂಸ ಮಾರುವ ಮೂಲಕ ತಮ್ಮ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಅಂಗಡಿ ತೆರೆಯದಂತೆ ತಿಳಿಸಿದ್ದರೂ ಕೇಳಿಲ್ಲ. ಇಂಥವರಿಗೆ ಬುದ್ಧಿ ಕಲಿಸುತ್ತಿದ್ದೇವೆ. ಸರ್ಕಾರವೂ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿಡಿಯೊ ಮಾಡಿದ್ದಾರೆ. ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ್ದಾರೆ. ದುಷ್ಕರ್ಮಿಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಾಕಿದ್ದರು. ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯಿಂದ ಅಳಿಸಿದ್ದಾರೆ’ ಎಂದು ದೂರಲಾಗಿದೆ.

ADVERTISEMENT

‘ಅದೇ ಸಮಯದಲ್ಲಿ ಮರಾಠರಿಗೆ ಸೇರಿದ ಮೂರು ಮಾಂಸದ ಅಂಗಡಿಗಳು ತೆರೆದಿದ್ದವು. ಆದರೆ, ದುಷ್ಕರ್ಮಿಗಳು ಮುಸ್ಲಿಂ ವ್ಯಕ್ತಿಯ ಅಂಗಡಿಯನ್ನಷ್ಟೆ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಉದ್ದೇಶಪೂರ್ವಕವಾಗಿ ಹೀಗೆ ವರ್ತಿಸಿದ್ದಾರೆ. ಆ ವ್ಯಕ್ತಿಯ ಅಂಗಡಿಯನ್ನು ಅಲ್ಲಿಂದ ಎತ್ತಂಗಡಿ ಮಾಡಿಸುವುದು ಕೆಲವರ ಉದ್ದೇಶವಾಗಿದೆ. ನಮ್ಮ ಬಳಿ ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪವನ್ನು ಹಲ್ಲೆಗೊಳಗಾದ ವ್ಯಕ್ತಿ ಪೊಲೀಸರು ಎದುರು ಮಾಡಿದ್ದಾರೆ’ ಎಂದು ತಿಳಿದುಬಂದಿದೆ.

ಆದರೆ, ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಹಲ್ಲೆ ನಡೆಸಿದ ಯುವಕರನ್ನು ಕರೆಸಿ ರಾಜಿ ಮಾಡಿಸಿದ್ದಾರೆ ಎಂದು ದೂರಲಾಗುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿ‍ಪಿ ವಿಕ್ರಂ ಅಮಟೆ, ‘ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ನಾನೂ ಗಮನಿಸಿದ್ದೇನೆ. ಆದರೆ, ಯಾರೂ ದೂರು ಕೊಟ್ಟಿಲ್ಲವಾದ್ದರಿಂದ ಪ್ರಕರಣ ದಾಖಲಾಗಿಲ್ಲ. ಇಂತಹ ಪ್ರಕರಣದಲ್ಲಿ ತೊಂದರೆಗೆ ಒಳಗಾದವರು ಮುಂದೆ ಬಂದು ದೂರು ನೀಡಿದರೆ ತನಿಖೆ ನಡೆಸುವುದಕ್ಕೆ ಸಹಕಾರಿ ಆಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.