ಒಕ್ಕುಂದ (ಬೈಲಹೊಂಗಲ ತಾ): ಒಕ್ಕುಂದ ಗ್ರಾಮವು ‘ಕವಿರಾಜಮಾರ್ಗ’ ಗ್ರಂಥ ರಚನೆಗೂ ಮುನ್ನವೇ ಪ್ರಸಿದ್ಧ ಐತಿಹಾಸಿಕ ನೆಲೆಯಾಗಿತ್ತು. ಕ್ರಿ.ಶ 850ರಲ್ಲಿ ರಚನೆಯಾದ ಕನ್ನಡದ ಈ ಮೊಲದ ಗ್ರಂಥದಲ್ಲಿ ಒಕ್ಕುಂದದ ಬಗ್ಗೆ ಉಲ್ಲೇಖವಿದೆ ಎಂಬುದನ್ನು ಇತಿಹಾಸ ತಜ್ಞರು ಶೋಧಿಸಿದ್ದಾರೆ.
ಇತಿಹಾಸದ ಪುಟಗಳಲ್ಲಿ ಮರೆತುಹೋದ ಈ ಊರಿನಲ್ಲಿ ಇತ್ತೀಚಿನ ದಿನಗಳಲ್ಲಿ ಒಕ್ಕುಂದ ಉತ್ಸವದ ಮೂಲಕ ಮತ್ತೆ ಪರಂಪರೆ ಕಳೆಗಟ್ಟುವಂತೆ ಮಾಡಲಾಗಿದೆ.
‘ಕಾವೇರಿಯಿಂದ ಮಾ ಗೋದಾವರಿವರ ಮಿರ್ಪನಾಡದಾ ಕನ್ನಡದೊಳ್
ಭಾವಿಸಿದಜನಪದಂ ವಸುಧಾವಳಯ ವಿಲೀನ ವಿಷದ ವಿಷಯ ವಿಶೇಷಂ||
ಅದರೊಳಗಂ ಕಿಸುವೊಳಲಾಜಿತ ಮಹಾಕೂಪನಗರದಾ ಪುಲಿಗೆರಿಯ||
ಸದಬಿಸುತ್ತ ಮಪ್ಪೊಂಕುಂದದ ನಡುವಣ ನಾಡೆ ಕನ್ನಡದ ತಿರುಳ್||’
ಕನ್ನಡದ ಮೊದಲ ಗ್ರಂಥ ‘ಕವಿರಾಜಮಾರ್ಗ’ದಲ್ಲಿ ಕನ್ನಡ ನಾಡಿನ ಕುರಿತಾದ ಸಾಲುಗಳು ಇವು. ಕವಿ ಹೇಳುವ ಹಾಗೆ; ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ವ್ಯಾಪಿಸಿದೆ. ಇಲ್ಲಿರುವ ಜನಪದವು ಸುಪ್ರಸಿದ್ಧ ವಿಷಯಗಳಿಗೆ ಮಿಗಿಲಾಗಿದೆ. ಆ ಜನಪದದೊಳಗೆ ಕಿಸುವೊಳಲು (ಇಂದಿನ ಪಟ್ಟದಕಲ್ಲು) ಕೊಪನಗರ (ಇಂದಿನ ಕೊಪ್ಪಳ) ಪುಲಿಗೇರಿ (ಇಂದಿನ ಲಕ್ಷ್ಮೇಶ್ವರ) ಒಂಕ್ಕುಂದ (ಇಂದಿನ ಒಕ್ಕುಂದ) ಈ ನಾಲ್ಕು ಊರುಗಳು ಕನ್ನಡ ನಾಡಿನ ದೇವಿಯ ಮುಕುಟಕ್ಕೆ ನಾಲ್ಕು ದಿಕ್ಕುಗಳಲ್ಲಿಇರುವ ನಾಡೇ ಕನ್ನಡ... ಎಂದು ಕೃತಿಕಾರ ಶ್ರೀವಿಜಯ ಹೇಳಿದ್ದಾನೆ.
1970ರಲ್ಲಿ ಮಲಪ್ರಭಾ ನದಿಯ ಜಲಾವೃತದಿಂದಾಗಿ ಗ್ರಾಮವು ಮುಳುಗಡೆಯಾಗಿ ಸ್ವಲ್ಪ ದೂರಕ್ಕೆ ಬಂದು ಮರು ನಿರ್ಮಾಣವಾಗಿದೆ. ಒಂದು ಮರಡಿಯ ಮೇಲೆ ಸ್ಥಾಪಿತವಾಗಿರುವ ಒಕ್ಕುಂದ ಎಂಬ ಐತಿಹ್ಯ ಇದೆ. ಹೀಗಾಗಿ, ಒಕ್ಕುಂದ ಎಂಬ ಒಕ್ಕುಂದ– ವಕ್ಕುಂದ ಎಂಬ ಹೆಸರು ಬಂದಿದೆ. ಸಾಹಿತ್ಯ, ಕಲೆ, ಸಂಸ್ಕೃತಿಯ ನೆಲೆಯೂ ಆಗಿದೆ ಎಂಬುದು ಗಮನಾರ್ಹ.
ಮಲಪ್ರಭೆಯ ನಡುವೆ ಪುರಾತನ ಒಕ್ಕುಂದದ ಅವಶೇಷಗಳು ಈಗಲೂ ಇವೆ. ಸುಂದರವಾದ ಶಿಲ್ಪಕಲೆಯಿಂದ ಮೂರು ದೇವಾಲಯಗಳಿವೆ. ಇವು ಹಿಂದೆ ಇದ್ದ ತೀರ್ಥಂಕರರ ಮೂರ್ತಿಯನ್ನು ಕಳೆದುಕೊಂಡು ಶಿವಲಿಂಗವನ್ನು ಪಡೆದುಕೊಂಡು ದೇವಾಲಯಗಳ ಸ್ವರೂಪ ಪಡೆದಿವೆ. ಈಗಲೂ ಹೊರ ಹಾಗೂ ಒಳ ಮಗ್ಗುಲಲ್ಲಿ ಜಿನಬಿಂಬಗಳು ಕಾಣಸಿಗುತ್ತವೆ.
ರಾಷ್ಟ್ರಕೂಟರ 1ನೇ ಕೃಷ್ಣ, ಇಮ್ಮಡಿ ಗೋವಿಂದ, ಧ್ರುವ, ಮುಮ್ಮಡಿ ಗೋವಿಂದ ಮೊದಲಾದವರು ಈ ನಾಡಿನಲ್ಲಿ ಆಡಳಿತ ನಡೆಸಿದ ದಾಖಲೆಗಳು ಲಭ್ಯವಾಗಿವೆ.
‘ಸದಭಿಸ್ತುತ ಮಪ್ಪೊಂಕುದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್’ ಅಂದರೆ ಸದಾಕಾಲ ಸಮೃದ್ಧಿಯಿಂದ ಕೂಡಿರುವ ನಾಡು ಎಂದರ್ಥ. ತಿರುಳ್ಗನ್ನಡ ಎಂದರೆ ತಿಳಿಯಾದ ಅಚ್ಚ ಕನ್ನಡ ಎಂಬ ಅರ್ಥವೂ ಬಂದಿದೆ’ ಎಂಬುದು ಬೈಲಹೊಂಗಲ ಅಕ್ಕಮಹಾದೇವಿ ಪದವಿ ಕಾಲೇಜು ಪ್ರಾಂಶುಪಾಲರೂ ಆದ ಸಂಶೋಧಕ ಪ್ರೊ.ಸಿ.ಬಿ. ಗಣಾಚಾರಿ ಅವರ ಅಭಿಮತ. ‘ಕವಿರಾಜ ಮಾರ್ಗದಲ್ಲಿ ಪಟ್ಟದಕಲ್ಲು ಕೊಪ್ಪಳ ಲಕ್ಷ್ಮೇಶ್ವರ ಒಕ್ಕುಂದ ಇವುಗಳನ್ನು ತಿರುಳ್ಗನ್ನಡ ನಾಡು ಎಂದು ಹೇಳಲಾಗಿದೆ. ಹಾಗಾಗಿ ಇಲ್ಲಿ ‘ತಿರುಳ್ಗನ್ನಡ ನಾಡು ಒಕ್ಕುಂದ ಉತ್ಸವ’ ಮಾಡಲಾಗುತ್ತದೆ’ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.