ಸವದತ್ತಿ: ಹೆಸರು ಬೆಳೆ ಖರೀದಿಯಲ್ಲಿನ ಅವ್ಯವಹಾರ ಖಂಡಿಸಿ ನಡೆದ ಪ್ರತಿಭಟನೆ ಕುರಿತು ಗುರುವಾರ ಎಪಿಎಂಸಿ ಹಮಾಲರ ಸಂಘದ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ರೈತಹಿತಕ್ಕಾಗಿ ಹಲವು ಮಹತ್ವದ ನಿರ್ಣಯ ಕೈಗೊಂಡು ತಹಶೀಲ್ದಾರ ಎಮ್.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡ ಅಶ್ವಥ್ ವೈದ್ಯ ಮಾತನಾಡಿ, ‘ಬೆಳೆಗೆ ತಕ್ಕಂತೆ ದರ ನಿಗದಿಪಡಿಸಲಾಗುವುದು. ಮಾರುಕಟ್ಟೆಗೆ ಬಂದ ಬೆಳೆಯ ತೂಕದಲ್ಲಿ ಲೋಪವಾಗದಂತೆ ಎಚ್ಚರವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸುವುದು. ವೇ ಬ್ರಿಜ್‌ಗೆ ರೈತ ಭರಿಸುವ ಎರಡು ಶುಲ್ಕ ಪೈಕಿ ಒಂದನ್ನು ಮಾತ್ರ ರೈತ ಪಾವತಿಸುವಂತಾಗಲಿ. ಈಗಾಗಲೇ ಶೇ. 70 ರಷ್ಟು ಹೆಸರು ಬೆಳೆ ಮಾರಾಟವಾದ ಕಾರಣ ಮುಂದಿನ ಕಡಲೆ ಬೆಳೆ ಖರೀದಿ ವೇಳೆ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು. ದಲ್ಲಾಳಿಗಳು ರೈತರ ಜೊತೆ ಸಮಯೋಚಿತವಾಗಿ ವರ್ತಿಸಲು ಸೂಚಿಸಿದರು.
ರೈತ ಮಹೇಶ ರಾವಳ ಮಾತನಾಡಿ, ‘ನಿಯಮದಂತೆ ಎಪಿಎಂಸಿ ಹೊರಗಡೆ ಇರುವ ಮಳಿಗೆಗಳನ್ನು ರೈತರ ಕೃಷಿ ಪರಿಕರಗಳ ಮಾರಾಟಕ್ಕೆ ಮೀಸಲಿರಿಸಬೇಕಿತ್ತು. ಆದರೆ, ಆಡಳಿತ ಮಂಡಳಿ, ದಲ್ಲಾಳಿಗಳು ತಮಗೆ ಆದಾಯದ ಮೂಲವನ್ನಾಗಿಸಿಕೊಂಡಿದ್ದಾರೆ. ಕೂಡಲೇ ಸ್ಥಗಿತಗೊಳಿಸಿ ರೈತರ ಉಪಯೋಗಕ್ಕೆ ಮೀಸಲಿಡಬೇಕು’ ಎಂದು ಆಗ್ರಹಿಸಿದರು.
ವರ್ತಕರ ಸಂಘದ ಅಧ್ಯಕ್ಷ ಮದನ್ ಚೋಪ್ರಾ, ‘ರೈತರು, ವರ್ತಕರು, ಎಪಿಎಂಸಿ ಕಾರ್ಯದರ್ಶಿ, ಅಧ್ಯಕ್ಷ ಹಾಗೂ ಎಲ್ಲರೂ ಸೇರಿ ಕೈಗೊಂಡ ನಿರ್ಣಯಗಳನ್ನು ದಲ್ಲಾಳಿಗಳೆಲ್ಲರು ಕಡ್ಡಾಯವಾಗಿ ಪಾಲಿಸಬೇಕು. ಎಪಿಎಂಸಿ ಕಾನೂನಿನ ಪ್ರಕಾರ ವ್ಯವಹರಿಸಲಾಗುವುದು. ಕುಡಿಯುವ ನೀರು, ರೈತರ ಕಟ್ಟೆ, ಶೌಚಾಲಯ ಹಾಗೂ ಮೂಲ ಸೌಕರ್ಯ ನೀಡಲಾಗುವದು’ ಎಂದು ತಿಳಿಸಿದರು.
ತಹಶೀಲ್ದಾರ ಎಮ್.ಎನ್. ಹೆಗ್ಗನ್ನವರ, ‘ಚರ್ಚಿತ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡದೇ ಇದ್ದ ದಲ್ಲಾಳಿಗಳ ಮೇಲೆ ಸೂಕ್ತ ಕ್ರಮ ಮತ್ತು ಪ್ರಕರಣ ದಾಖಲಿಸಲಾಗುವದು. ನಾಡಿನ ರೈತರಿಗೆ ಮೋಸ ಆಗುವದನ್ನು ಇಲಾಖೆ ಸಹಿಸುವದಿಲ್ಲ’ ಎಂದು ತಿಳಿಸಿದರು.
ಎಪಿಎಂಸಿ ಕಾರ್ಯದರ್ಶಿ ಕೃಷ್ಣಾನಂದ ನಾಯಕ, ‘ಪ್ಲಾಸ್ಟಿಕ್ ಚೀಲಗಳನ್ನು ಸಂಪೂರ್ಣವಾಗಿ ನಿಷೇಧಿಸಿ, ರೈತನ ಬೆಳೆಗೆ ಕಡ್ಡಾಯವಾಗಿ ರಸೀದಿ ನೀಡಲಾಗುವದು’ ಎಂದರು.
ವಿ.ಕೆ. ಮಾಮನಿ, ಭರಮಣ್ಣ ಅಣ್ಣಿಗೇರಿ, ಯಲ್ಲಪ್ಪ ಮುತಗೊಂಡ, ಜಯಪ್ಪಗೌಡ ಪಾಟೀಲ, ಶಿವಾನಂದ ಹೂಗಾರ, ಪ್ರಕಾಶ ವರವಣ್ಣವರ, ಮಹೇಶ ರಾವಳ, ಬಾಬು ಕಡಕೋಳ ಹಾಗೂ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.