
ಮೂಡಲಗಿ: ‘ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರಭಾವಿ ಕ್ಷೇತ್ರದಲ್ಲಿ ಅಧಿಕ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟವು ಸುಧಾರಣೆಯಾಗಿದೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲ್ಲೂಕಿನ ಸುಣಧೋಳಿಯ ಬಳೋಲ ಮಡ್ಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನದ ಅಡಿಯಲ್ಲಿ ಅಂದಾಜು ₹16 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ್ದರ ಫಲವಾಗಿ ಪ್ರತಿ ಗ್ರಾಮವು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗಿದೆ ಮತ್ತು ಅರಭಾವಿ ಕ್ಷೇತ್ರವು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ ಎಂದರು.
ಹಿಂದುಳಿದ, ಅಲ್ಪ ಸಂಖ್ಯಾತರ, ಪರಿಶಿಷ್ಟ ಜಾತಿ, ಪಂಗಡಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಅರಭಾವಿ ಕ್ಷೇತ್ರದಲ್ಲಿ ಈ ವರೆಗೆ 13 ವಿವಿಧ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಗ್ರಾಮೀಣ ಮಕ್ಕಳು ಇಂಥ ವಸತಿ ಶಾಲೆಗಳಿಂದ ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಬಹಳಷ್ಟು ಉಪಯುಕ್ತವಾಗಿವೆ ಎಂದರು.
ಬರುವ ನವೆಂಬರ್ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಲಿದ್ದು, ರೈತರು ಸಾಗಿಸುವ ಕಬ್ಬಿನ ಸಾರಿಗೆಗೆ ಅನುಕೂಲವಾಗುವ ದೃಷ್ಟಿಯಿಂದ ಅಗತ್ಯವಿರುವಲ್ಲಿ ರಸ್ತೆಗಳ ಸುಧಾರಣೆ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಾಕಷ್ಟು ಸುಧಾರಣೆ ಕಾಮಗಾರಿಗಳನ್ನು ಮಾಡಲಾಗಿತ್ತು. ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಕೊರತೆ ಇದ್ದಾಗ್ಯೂ ಸಹ ಪ್ರಯತ್ನ ಮಾಡಿ ಅವಶ್ಯವಿರುವಲ್ಲಿ ಸುಧಾರಣೆಯ ಕಾರ್ಯ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸುಣಧೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಅಮಣಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಫಕೀರಪ್ಪ ಪೂಜೇರಿ, ತಾಲ್ಲೂಕು ಅಧಿಕಾರಿ ಹಿರೇಮಠ, ಬಿಇಒ ಪಿ.ಬಿ.ಹಿರೇಮಠ, ಸುಣಧೋಳಿ- ಲಕ್ಷ್ಮೇಶ್ವರ ಗ್ರಾಮಗಳ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.