ಹುಕ್ಕೇರಿಯಲ್ಲಿ ಸೋಮವಾರ ಗುಡಸ ಗ್ರಾಮದ ಗಾಯರಾಣ ಜಾಗೆಯನ್ನು ಅತಿಕ್ರಮಣ ಮಾಡಿದವರಿಂದ ಬಿಡಿಸಿ ಕುರಿ ಮೇಯಿಸಲು ಒದಗಿಸುವಂತೆ ವಿವಿಧ ಗ್ರಾಮಗಳ ಕುರಿಗಾಹಿಗಳು ಪ್ರತಿಭಟನೆ ನಡೆಸಿದ ಸಮಯದಲ್ಲಿ ಕೋರ್ಟ್ ಸರ್ಕಲ್ ನಲ್ಲಿ ಕುರಿಗಳನ್ನು ನಿಲ್ಲಿಸಿ ಪ್ರತಿಭಟಿಸಲಾಯಿತು
ಹುಕ್ಕೇರಿ: ಗುಡಸ ಗ್ರಾಮದಲ್ಲಿರುವ ಗಾಯರಾಣ ಜಾಗೆಯನ್ನು ಹಸ್ತಾಂತರ ಮಾಡಬಾರದು. ಅತಿಕ್ರಮಣ ಮಾಡಿದವರನ್ನು ತೆರುವುಗೊಳಿಸಲು ಉದಾಸೀನ ಮಾಡುತ್ತಿರುವ ಕ್ರಮವನ್ನು ಖಂಡಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ (ಮಹಿಳೆಯರು ಸೇರಿ) ಕುರಿಗಾಹಿಗಳು ಕುರಿಸಮೇತ ಪಟ್ಟಣದಲ್ಲಿ ಸೋಮವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಗುಡಸ್, ಬೆಲ್ಲದ ಬಾಗೇವಾಡಿ, ಶಿರಹಟ್ಟಿ, ಸಾರಾಪುರ, ಬೆಳವಿ, ಕೊಟಬಾಗಿ, ಕಡಹಟ್ಟಿ ಗ್ರಾಮದ ಕುರಿಗಾಹಿಗಳು ನೂರಾರು ಕುರಿ ಸಮೇತ ಕೋರ್ಟ್ ಸರ್ಕಲ್ ಬಳಿ ಬಂದು ಪ್ರತಿಭಟನೆಗೆ ನಡೆಸಿ ಗಮನ ಸೆಳೆದರು.
ಹಾಲುಮತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಜಯಪ್ರಕಾಶ್ ಕರ್ಜಗಿ, ವಕೀಲ ಭೀಮಸೇನ್ ಬಾಗಿ, ಏಳು ಒಕ್ಕೂಟದ ಅಧ್ಯಕ್ಷ ಶಂಕರ್ ಹೆಗಡೆ, ಗುಡಸ ಗ್ರಾಮದ ಸಿಂಧೂರ ಕರಿಗಾರ, ಬಸವರಾಜ ಹಾಲಟ್ಟಿ, ಎಸ್.ವೈ.ಏಗನ್ನವರ, ನವೀನ ಮುತ್ನಾಳ ಮಾತನಾಡಿ, ಹಲವು ಬಾರಿ ಈ ಕುರಿತು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ, ಕವಡೆ ಕಾಸಿನ ಕಿಮ್ಮತ್ತು ಕೊಡದೆ, ನಿರ್ಲಕ್ಷ್ಯ ತೋರಿದ್ದಕ್ಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ದೂರಿದರು.
ಹೋರಾಟ ವಿಸ್ತರಣೆ: ಇನ್ನು ಮುಂದೆ ಯಾವುದೇ ಕ್ರಮ ಜರುಗಿಸದೆ ಇದ್ದಲ್ಲಿ, ಜಿಲ್ಲೆಯಾದ್ಯಂತ, ರಾಜ್ಯದಾದ್ಯಂತ ಕುರಿ ಸಮೇತ ಹೋರಾಟ ಮಾಡುವ ಎಚ್ಚರಿಕೆಯನ್ನು ಮುಖಂಡರು ನೀಡಿದರು. ತಹಶೀಲ್ದಾರ್ ಬರುವವರೆಗೆ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಕೋರ್ಟ್ ಸರ್ಕಲ್‌ನಲ್ಲಿ ಕುಳಿತರು.
ಜನರಿಗೆ ತೊಂದರೆ: ಸೋಮವಾರ ಸಂತೆ ದಿನವಾದ್ದರಿಂದ ನಾಲ್ಕು ದಿಕ್ಕಿನಲ್ಲಿ ವಾಹಗಳು ಸೇರಿಕೊಂಡು ಟ್ರಾಫಿಕ್ ಜಾಮ್ ಆಯಿತು. ಪೊಲೀಸರು ಎಷ್ಟೇ ಹರಸಾಹಸ ಮಾಡಿದರೂ ಪ್ರತಿಭಟನೆಕಾರರು ಪಟ್ಟು ಸಡಿಲಿಸಲಿಲ್ಲ. ಗ್ರೇಡ್–2 ತಹಶೀಲ್ದಾರ್ ಪ್ರಕಾಶ ಕಲ್ಲೋಳಿ ಮನವಿ ಸ್ವೀಕರಿಸಲು ಬಂದಾಗ, ಪ್ರತಿಭಟನಾಕಾರರು ವಾಗ್ವಾ ಮಾಡಿ, ಪ್ರಮಾಣ ಪತ್ರ ಕೊಡುವಂತೆ ಆಗ್ರಹಿಸಿದರು.
ತಹಶೀಲ್ದಾರ್ ಮಂಜುಳಾ ನಾಯಕ್ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ನಂತರ ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ವಿವಿಧ ಗ್ರಾಮಗಳ ಮುಖಂಡರಾದ ಬಸವಣ್ಣಿ ನಿಡಸೋಸಿ, ಲಕ್ಕಪ್ಪ ಹಾಲಟ್ಟಿ, ಬೀರಪ್ಪ ಮನ್ನಿಕೇರಿ, ಬಸಪ್ಪ ವಂಟಮೂರಿ, ರಾಯಪ್ಪ ಪಾಮಲದಿನ್ನಿ, ಆನಂದ ಖಿಲಾರಿ, ವಿಠಲ್ ಹಾಲಟ್ಟಿ, ಸಿದ್ದಪ್ಪ ಗೋಟೂರಿ, ಸಚಿನ ಹೆಗಡೆ, ನಿತೀನ ಮುತ್ನಾಳ ಸೇರಿದಂತೆ ನೂರಾರು ಕುರಿಗಾಹಿಗಳು ಇದ್ದರು.
ತಹಶೀಲ್ದಾರ್ ಭರವಸೆ
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಅವರು ಈ ವಿಷಯ ಕುರಿತು ನೋಟಿಸ್ ಬೋರ್ಡ್‌ಗೆ ಹಾಕಿ ನೊಟೀಸ್ ಕೊಡಲಾಗಿದೆ. ಪೊಲೀಸರ ಸಹಾಯದಿಂದ ಅತಿಕ್ರಮಣ ಮಾಡಿದವರನ್ನು (ಬೇರೆ ತಾಲ್ಲೂಕಿನಿಂದ ಬಂದವರು) ತೆರವು ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.