ಹುಕ್ಕೇರಿ: ‘ಜನರ ಕುಂದುಕೊರತೆಗಳನ್ನು ಅರಿತುಕೊಳ್ಳಲು ಕೆಡಿಪಿ ಸಭೆಯನ್ನು ನಡೆಸಬೇಕು. ಆದರೆ ಸರ್ಕಾರದಿಂದ ಎರಡು ತಿಂಗಳ ಹಿಂದೆ ನೇಮಕಗೊಂಡ ಕೆಡಿಪಿ ಸದಸ್ಯರನ್ನು ಸಭೆಗೆ ಆಮಂತ್ರಿಸಿಲ್ಲ ಎಂದು ತಿಳಿದು ಬಂದಿದೆ. ಕೆಡಿಪಿ ಸಭೆ ನಡೆಯದಿದ್ದರೆ, ತಕ್ಷಣ ಸಭೆ ನಡೆಸಿ ನೇಮಕಗೊಂಡ ಸದಸ್ಯರಿಗೆ ಆಮಂತ್ರಣ ನೀಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಕುಂದುಕೊರತೆ ಸಭೆ ನಡೆಸಿ ಮಾತನಾಡಿದರು.
ಜನಪ್ರತಿನಿಧಿಗಳು ಇಲ್ಲ ಎಂಬುದು ಸರಿ. ಆದರೆ ಸರ್ಕಾರಿ ಯೋಜನೆ ಅನುಷ್ಟಾನ ಮಾಡಲು ಅಧಿಕಾರಿಗಳು ನಿಯತಕಾಲಿಕ ಸಭೆ ಜರುಗಿಸಿ, ಪ್ರಗತಿ ಕುರಿತು ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ತಮ್ಮ ಭಾಗದ ಸಮಸ್ಯೆ ತೋಡಿಕೊಂಡರು. ಅದಕ್ಕೆ ಸ್ಪಂದಿಸಿದ ಸಚಿವರು ಸಂಬಂಧಿತ ಅಧಿಕಾರಿಗಳು ತಕ್ಷಣ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಗ್ಯಾರಂಟಿ ಅನುಷ್ಟಾನ ಯೋಜನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಾನೂಲ್ ತಹಶೀಲ್ದಾರ್, ಕೆಡಿಪಿ ಸದಸ್ಯರಾದ ಲಕ್ಷ್ಮಣ ಹೂಲಿ, ಪಾಶ್ಚಾಪುರದ ಮುಜಾವರ್, ಮುಖಂಡರಾದ ಕೆಂಪಣ್ಣ ಶಿರಹಟ್ಟಿ, ಮಹಾಂತೇಶ ಮಗದುಮ್ಮ, ವಕೀಲರಾದ ಭೀಮಸೇನ ಬಾಗಿ, ಏಗನ್ನವರ, ಅಪ್ಪಾಸಾಹೇಬ ಸಾರಾಪುರೆ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.