ಹುಕ್ಕೇರಿ: ಸ್ಥಳೀಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಸೆ.28 ರಂದು ಜರುಗುವ 15 ಕ್ಷೇತ್ರದ ಚುನಾವಣೆಗೆ ಕೊನೆಯ ದಿನವಾದ ಶನಿವಾರ ಒಟ್ಟು 116 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾ ಅಧಿಕಾರಿಯೂ ಆದ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಸ ಸಂಪಗಾವಿ ಹೇಳಿದರು.
ಶನಿವಾರ ಮಾಧ್ಯಮದವರ ಜತೆ ಮಾತನಾಡಿ, ಸೆ.28ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4ರ ವರೆಗೆ ಮತದಾನ ನಡೆಯಲಿದ್ದು, ಒಟ್ಟು 60,064 ಜನ ಮತ ಚಲಾಯಿಸಲಿದ್ದಾರೆ. 15 ಸ್ಥಾನದಲ್ಲಿ 9 ಸಾಮಾನ್ಯ, 2 ಮಹಿಳಾ ಮೀಸಲಾತಿ, ಹಿಂದುಳಿದ ‘ಅ’ ವರ್ಗ ಮತ್ತು ‘ಬ’ ವರ್ಗಕ್ಕೆ ತಲಾ 1, ಪ.ಜಾತಿ ಮತ್ತು ಪಂಗಡಕ್ಕೆ ತಲಾ 1 ರಂತೆ ಮೀಸಲಾತಿ ಕಲ್ಪಿಸಲಾಗಿದೆ ಎಂದರು.
ಸಾಮಾನ್ಯ 61, ಮಹಿಳಾ 14, ‘ಅ’ವರ್ಗ 20, ‘ಬ’ವರ್ಗ 4, ಎಸ್.ಸಿ.12 ಮತ್ತು ಎಸ್.ಟಿ.5 ನಾಮಪತ್ರ ಸಲ್ಲಿಕೆಯಾಗಿವೆ. ಸೆ.21 ನಾಮಪತ್ರ ಪರಿಶೀಲನೆ ಮತ್ತು ಸೆ.22 ನಾಮಪತ್ರ ಹಿಂಪಡೆಯುವ ದಿನವಾಗಿದೆ. ಚುನಾವಣೆಯನ್ನು ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆ ಆವರಣ ಮತ್ತು ಬಾಪೂಜಿ ಶಿಕ್ಷಣ ಸಂಸ್ಥೆ, ಮಸರಗುಪ್ಪಿ ಕ್ರಾಸ್,ಎಲಿಮುನ್ನೋಳಿ ಆವರಣದಲ್ಲಿ ನಡೆಸಲಾಗುವುದು. ಮಸ್ಟರಿಂಗ್ ಮತ್ತು ಕೌಂಟಿಂಗ್ ಬಾಪೂಜಿ ಶಾಲೆಯಲ್ಲಿ ಜರುಗಲಿದೆ ಎಂದು ತಿಳಿಸಿದರು.
ಒಂದು ಮತಕೇಂದ್ರಕ್ಕೆ ತಲಾ 500 ಮತದಾರರಂತೆ ಒಟ್ಟು 122 ಮತದಾನ ಕೇಂದ್ರ ಸ್ಥಾಪಿಸಲಾಗುವುದು. ಅದರಲ್ಲಿ 67 ಬಾಪೂಜಿ ಆವರಣದಲ್ಲಿ ಮತ್ತು 55 ಎಸ್.ಕೆ.ಹೈಸ್ಕೂಲ್ ಆವರಣದಲ್ಲಿ ಸ್ಥಾಪಿಸಲಾಗುವುದು. ಇವುಗಳ ಪೈಕಿ ಬಾಪೂಜಿಯಲ್ಲಿ 34 ಮತ್ತು ಎಸ್.ಕೆ.ಹೂಸ್ಕೂಲ್ ಆವರಣದಲ್ಲಿ 24 ತಾತ್ಕಾಲಿಕ ಶೆಡ್ ನಿರ್ಮಿಸಲಾಗುವುದು. 122 ಹಾಲಗಳಲ್ಲಿ ಏಕಕಾಲಕ್ಕೆ ಮತ ಎಣಿಕೆಯನ್ನು ಮತದಾನದ ನಂತರ ಪ್ರಾರಂಭಿಸಲಾಗುವುದು ಎಂದರು.
ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ್, ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೆಮಲಾಪುರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.