ಹುಕ್ಕೇರಿ: ಪಟ್ಟಣದ ಹಿರೇಮಠದ ದಸರಾ ಉತ್ಸವ ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಸಂಜೆ ‘ಬನ್ನಿ ಮುಡಿಯುವ’ ಮೂಲಕ ಸಮಾರೋಪಗೊಂಡಿತು.
ಶ್ರೀಗಳನ್ನು ಮಠದಿಂದ ಪಲ್ಲಕ್ಕಿ ಉತ್ಸವದಲ್ಲಿ ವಾದ್ಯಮೇಳ ಸಮೇತ ಭಕ್ತರು ಪಟ್ಟಣದ ಹೊರವಲಯದ ಸೀಡ್ ಫಾರ್ಮ್ ಹತ್ತಿರ ಕರೆದೊಯ್ದರು. ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿದ ನಂತರ ಶ್ರೀಗಳು ಬನ್ನಿ ಮುರಿದ ನಂತರ ನೂರಾರು ಭಕ್ತರು ಬನ್ನಿ ಪಡೆದರು. ಮೆರವಣಿಗೆ ಮೂಲಕ ಶ್ರೀಗಳನ್ನು ಮರಳಿ ಮಠಕ್ಕೆ ತರಲಾಯಿತು. ಮಠದ ಗುರುಶಾಂತ ಗದ್ದುಗೆ, ಅನ್ನಪೂರ್ಣೇಶ್ವರಿ ದೇವಿಗೆ ಶ್ರೀಗಳು ಬನ್ನಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ನಂತರ ದೀಪೋತ್ಸವ ಜರುಗಿತು.
ದರಬಾರ್: ಮಠದ ಪ್ರಾಂಗಣದಲ್ಲಿ ದರಬಾರ್ ನಡೆಸಿದ ಶ್ರೀಗಳು ದಸರಾ ಹಬ್ಬ ಮತ್ತು ಬನ್ನಿ ಗಿಡದ ಮಹತ್ವ ತಿಳಿಸಿ, ಎಲ್ಲರೂ ಬಂಗಾರದಂತೆ ಸ್ವಚ್ಛ ಮನಸ್ಸಿನಿಂದ ಜೀವನ ಸಾಗಿಸಲು ಸಲಹೆ ನೀಡಿದರು.
ಗೌರವಾರ್ಪಣೆ: ದಸರಾದಲ್ಲಿ ಮಠಕ್ಕೆ ಹಕ್ಕುದಾರರಾಗಿ (ಸೇವಕರಾಗಿ) ಕಾರ್ಯ ನಿರ್ವಹಿಸಿದ ಬನ್ನಿ ಮುಡಿಯುವ, ಬೆತ್ತದವರ, ಛತ್ರಿ ಚಾಮರ, ಪುರವಂತ, ದೀವಟಿಗೆ, ಮಠಪತಿ, ಕಾಳಿಶಿಂಗೆ, ಸಂಬಾಳ, ಕಹಳೆ ಮತ್ತು ವಾಜಂತ್ರಿ, ಕಾರಿಕ್ ಮತ್ತು ಚಾರದವರ, ಪಲ್ಲಕ್ಕಿ ಹೊತ್ತವರ ಕುಟುಂಬದವರಿಗೆ ಮಠದ ವತಿಯಿಂದ ಶ್ರೀಗಳು ಗೌರವ ಸಮರ್ಪಣೆ ಮಾಡಿದರು. ನಂತರ ಭಕ್ತರು ಶ್ರೀಗಳಿಗೆ ಬಂಗಾರ (ಬನ್ನಿ ಪತ್ರಿ) ನೀಡಿ ಆಶೀರ್ವಾದ ಪಡೆದರು.
ಗುರುಕುಲ ಮುಖ್ಯಸ್ಥ ಸಂಪತ್ ಕುಮಾರ ಶಾಸ್ತ್ರೀಜಿ, ಅಂತೂರ–ಬೆಂತೂರನ ಪ್ರವಚನಕಾರ ಕುಮಾರ ಸ್ವಾಮೀಜಿ, ಸಿದ್ಧಲಿಂಗಯ್ಯ ಸ್ವಾಮೀಜಿ, ನಿಶಾಂತ ಸ್ವಾಮೀಜಿ, ಮುತ್ತು ಸ್ವಾಮೀಜಿ, ಉದಯ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ ಮುಖಂಡರಾದ ಪಿಂಟು ಶೆಟ್ಟಿ, ಸಂಜಯ ನಿಲಜಗಿ, ಸೋಮು ಪಟ್ಟಣಶೆಟ್ಟಿ, ಚನ್ನಪ್ಪ ಗಜಬರ್, ಬಸು ನಂದಿಕೋಲಮಠ, ವಿರೇಶ್ ತಾರಳಿ, ಶೀತಲ್ ಸೊಲ್ಲಾಪುರೆ, ರವೀಂದ್ರ ಬಸ್ತವಾಡ, ಸಂಜು ಬಸ್ತವಾಡ, ಬಾಹುಬಲಿ ಬಾಳಿಕಾರ, ಮಹಾವೀರ ಬಾಗಿ, ರೋಹನ್ ಬಸ್ತವಾಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.