ಸವದತ್ತಿ (ಬೆಳಗಾವಿ ಜಿಲ್ಲೆ): ಇಲ್ಲಿನ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಮುತ್ತಪ್ಪ ಗಣಾಚಾರ (25) ಎಂಬಾತ ತನ್ನ ಪತ್ನಿ ಐಶ್ವರ್ಯಾ (22) ಹಾಗೂ ಅತ್ತೆ ಅನುಸೂಯಾ (48) ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಹುಬ್ಬಳ್ಳಿಯ ಕೆಎಂಸಿಗೆ ದಾಖಲಿಸಲಾಗಿದೆ.
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಸವಟಗಿ ಗ್ರಾಮದ ಮುತ್ತಪ್ಪ ಮತ್ತು ಸವದತ್ತಿ ತಾಲ್ಲೂಕಿನ ಕಟ್ಟಿಕಟ್ಟಿ ಗ್ರಾಮದ ಐಶ್ವರ್ಯಾ ಅವರ ವಿವಾಹ ವರ್ಷದ ಹಿಂದೆ ಆಗಿತ್ತು. ಐಶ್ವರ್ಯಾ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮಂಗಳವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಬಿಡುವಿನ ವೇಳೆ ಮುತ್ತಪ್ಪ ಕಬ್ಬು ಕಟಾವು ಮಾಡುವ ಕೊಯ್ತಾದಿಂದ ಐಶ್ವರ್ಯಾ ಮೇಲೆ ದಾಳಿ ಮಾಡಿದ. ಅದನ್ನು ತಪ್ಪಿಸಲು ಬಂದ ಅನುಸೂಯಾಗೂ ಗಾಯವಾಯಿತು. ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ಸವದತ್ತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯಿಂದ ಮಹಿಳೆಯನ್ನು ಕಾಪಾಡಲು ಬಂದ ಅವರ ವಕೀಲರಿಗೂ ಗಾಯಗಳಾಗಿವೆ.
ಇದೇ ಆರೋಪಿ, 2024 ಡಿಸೆಂಬರ್ 25ರಂದು ಬೈಲಹೊಂಗಲ ತಾಲ್ಲೂಕಿನ ಬೆಳವಡಿ ಗ್ರಾಮದಲ್ಲಿ ಅನೈತಿಕ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬರ ಮೇಲೆ ಕುಡಗೋಲಿನಿಂದ 24 ಬಾರಿ ದಾಳಿ ಮಾಡಿದ್ದ. ಸದ್ಯ ಜಾಮೀನು ಪಡೆದು ಹೊರಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.