ADVERTISEMENT

ನನ್ನ ಮೂಲ ಕಾಂಗ್ರೆಸಲ್ಲ, ಜನಸಂಘ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 15:12 IST
Last Updated 10 ಜನವರಿ 2021, 15:12 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ನನ್ನ ಮೂಲ ಕಾಂಗ್ರೆಸ್ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ನಾನು ಅಸಲಿ ಜನಸಂಘದವನು. ಅಲ್ಲಿದ್ದಾಗ ಹಾಫ್‌ ಚಡ್ಡಿ ಮತ್ತು ಟೋಪಿ ಧರಿಸುತ್ತಿದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ನಾವಗೆ ಗ್ರಾಮದ ಬಳಿಯ ಗಣೇಶ ಬಾಗ್ ತೋಟದಲ್ಲಿ ಮುಖಂಡ ಧನಂಜಯ ಜಾಧವ ಮಿತ್ರ ಪರಿವಾರದಿಂದ ಭಾನುವಾರ ಆಯೋಜಿಸಿದ್ದ ‘ಹಿಂದುತ್ವದ ಏಕತೆಗಾಗಿ ಹಿಂದೂ ಕಾರ್ಯಕರ್ತರ ಸ್ನೇಹ ಭೋಜನ’ ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ತಂದೆ ಗೋವಾ ವಿಮೋಚನಾ ಚಳವಳಿ ವೇಳೆ 3 ತಿಂಗಳು ಜೈಲಿನಲ್ಲಿದ್ದರು. ನಾವು ಜನಸಂಘದಲ್ಲಿ ದೀಪದ ಚಿತ್ರವಿದ್ದ ಕರಿ ಟೋಪಿ ಹಾಕುತ್ತಿದ್ದೆ. ಜನ ಸಂಘದಿಂದದ ಉದಯವಾಗಿದ್ದೇವೆ. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಜಾರಕಿಹೊಳಿ ಕುಟುಂಬ ಜನಸಂಘದಿಂದ ಬಂದ ಕುಟುಂಬ. ತಂದೆ ಲಕ್ಷ್ಮಣರಾವ್ ಜಾರಕಿಹೊಳಿ ಜಗನ್ನಾಥ ಜೋಶಿ ಅವರ ಅನುಯಾಯಿ ಆಗಿದ್ದರು. ಗೋವಾ ವಿಮೋಚನೆಗಾಗಿ ಹೋರಾಡಿ ಜೈಲಿನಲ್ಲಿದ್ದರು. ಒಮ್ಮೆ ಸುರೇಶ ಅಂಗಡಿ ಅವರನ್ನು ಜನ ಸಂಘದ ನಿಜವಾದ ಚಿಹ್ನೆ ಬಗ್ಗೆ ಕೇಳಿದ್ದೆ. ಅವರಿಗೆ ಅದು ಗೊತ್ತಿರಲಿಲ್ಲ. ನಾನೇ ತಿಳಿಸಿದ್ದೆ’ ಎಂದು ಮೆಲುಕು ಹಾಕಿದರು.

ADVERTISEMENT

‘ಮುಂದಿನ ಚುನಾವಣೆಯಲ್ಲಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಬಹಳ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಪಕ್ಷದ ಪರ ಕೆಲಸ ಮಾಡಬೇಕು. ಪಕ್ಷಕ್ಕೆ ದ್ರೋಹ ಮಾಡುವುದಿಲ್ಲವೆಂದು ಜ್ಯೋತಿಬಾ ದೇವರ ಮೂರ್ತಿ ಮುಟ್ಟಿ ಆಣೆ ಮಾಡಬೇಕು. ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುವುದು ನಮ್ಮ ಸಂಕಲ್ಪವಾಗಿದ್ದು, ಎಲ್ಲರೂ ಸಹಕರಿಸಬೇಕು’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಜಿಲ್ಲೆಯ ಖಾನಾಪುರ, ಬೈಲಹೊಂಗಲ, ಬೆಳಗಾವಿ ಗ್ರಾಮೀಣ ಸೇರಿದಂತೆ ಎಲ್ಲ ಕಡೆಗೂ ಬಿಜೆಪಿಮಯವಾಗಲಿದೆ. ಕಾಂಗ್ರೆಸ್‌ನ ಕೈ ಬೆಳಿಗ್ಗೆ ಮಾತ್ರ ಉಪಯೋಗಕ್ಕೆ ಬರಲಿದೆ’ ಎಂದು ಹೇಳಿದರು.

‘ನಾನು ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷ ಬದಲಿಸಿದರೆ ನನ್ನಪ್ಪ ಯಾರು ಎಂದು ನಾನೇ ಪ್ರಶ್ನಿಸಿಕೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.