ADVERTISEMENT

ಮಂತ್ರಿ ಸ್ಥಾನ ಕೊಡಿಸಲು ಯಾರ ಪರವೂ ವಕಾಲತ್ತು ವಹಿಸಲ್ಲ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 12:51 IST
Last Updated 12 ನವೆಂಬರ್ 2020, 12:51 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಯ ಪರಮಾಧಿಕಾರ. ಈ ವಿಷಯದಲ್ಲಿ ನಾನು ಯಾರ ಪರವಾಗಿಯೂ ವಕಾಲತ್ತು ವಹಿಸುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದೊಡ್ಡ ಇಲಾಖೆಯ ಹೊಣೆಯನ್ನು ನನಗೆ ನೀಡಿದ್ದಾರೆ. ಅದರ ಬಗ್ಗೆ ಗಮನಹರಿಸುತ್ತೇನೆ. ಯಾರನ್ನೂ ಮಂತ್ರಿ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಉಮೇಶ ಕತ್ತಿ ಹಿರಿಯ ಶಾಸಕರು. ಅವರು ಸಚಿವರಾದರೆ ಒಳ್ಳೆಯದು. ಮೊದಲಿನಿಂದಲೂ ಆ ಒತ್ತಾಯವಿದೆ’ ಎಂದರು.

ಬೆಂಗಳೂರಿನ ಮನೆಯಲ್ಲಿ ಕೆಲವು ಶಾಸಕರ ಸಭೆ ನಡೆಸಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ನನ್ನ ಮೇಲೆ ಬಿಜೆಪಿ ಶಾಸಕರಿಗೆ ಅಪಾರವಾದ ಗೌರವವಿದೆ. ಈ ಆಧಾರದ ಮೇಲೆ ಅನೇಕ ಶಾಸಕರು ಸೇರಿ ಊಟ ಮಾಡಿದ್ದೇವೆ. ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಇಲಾಖೆಯ ಕೆಲವು ಕಾಮಗಾರಿಗಳ ಬಗ್ಗೆ ಚರ್ಚಿಸಲು ಬಂದಿದ್ದರು. ಎಲ್ಲ ವಿಷಯದಲ್ಲೂ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ನನ್ನ ಇತಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದೇವೆ. ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ’ ಎಂದು ತಿಳಿಸಿದರು.

ADVERTISEMENT

‘ಮಾತು ಕೊಟ್ಟಂತೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಹಾಲಿ ಅಧ್ಯಕ್ಷ ರಮೇಶ ಕತ್ತಿ ಅವರನ್ನೇ ಮುಂದುವರಿಸಬೇಕು. ಈ ವಿಷಯದಲ್ಲಿ ಶಾಸಕ ಉಮೇಶ ಕತ್ತಿ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭೇಟಿಯಾಗಿದ್ದಾರೆ. ಇದರಲ್ಲಿ ವಿಶೇಷವೇನಿಲ್ಲ. ರಮೇಶ ಕತ್ತಿ ನನ್ನ ಬಾಲ್ಯದ ಗೆಳೆಯ, ಅವನೇ ಅಧ್ಯಕ್ಷ ಆಗಬೇಕು’ ಎಂದು ತಿಳಿಸಿದರು.

‘ಉಪ ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ, ‘ಇವಿಎಂನಲ್ಲಿ ದೋಷವಿದೆ ಎನ್ನುವುದಾದರೆ ಕಾಂಗ್ರೆಸ್‌ನಲ್ಲಿದ್ದಾಗ ನಾನೂ ಸೋಲುತ್ತಿದೆ’ ಎಂದರು.

‘ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಗದ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ತಾಂತ್ರಿಕ ತೊಂದರೆಯಿಂದ ರಾಜ್ಯದಲ್ಲಿ 25ಸಾವಿರ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಸಮಸ್ಯೆ ಶೀಘ್ರವೇ ಬಗೆಹರಿಯಲಿದ್ದು, ಪರಿಹಾರ ದೊರೆಯಲಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.