ADVERTISEMENT

ಬೆಳಗಾವಿ 3 ಉಪವಿಭಾಗ ಜಿಲ್ಲೆಯಾಗಲು ನಾನೇ ನೇತೃತ್ವ ವಹಿಸುವೆ: ಕತ್ತಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 13:34 IST
Last Updated 12 ಏಪ್ರಿಲ್ 2022, 13:34 IST
   

ಬೆಳಗಾವಿ: ‘ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ಪ್ರತ್ಯೇಕಿಸುವುದು ಅವಶ್ಯವಾಗಿದೆ’ ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಉಪವಿಭಾಗ ಕಚೇರಿಗಳಿರುವ ಬೈಲಹೊಂಗಲ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ ರಚನೆ ಆಗಬೇಕು. ಅಲ್ಲದೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಸಿ ಕಚೇರಿ ಇರುವ ಕೇಂದ್ರಗಳೇ ಜಿಲ್ಲಾ ಕೇಂದ್ರವಾಗಬೇಕು ಎಂಬ ಅನಿಸಿಕೆ ನನ್ನದು. ಜಿಲ್ಲಾ ವಿಭಜನೆ ಹೋರಾಟದ ನೇತೃತ್ವ ನಾನೇ ವಹಿಸಿಕೊಳ್ಳುವೆ’ ಎಂದರು.

‘ಜಿಲ್ಲೆಯನ್ನು ವಿಭಜಿಸಬೇಕು ಎನ್ನುವುದು ಸರ್ಕಾರಕ್ಕೂ ಗೊತ್ತಿದೆ. ನಾನು ಜಿಲ್ಲೆಯ ನಾಯಕನಾಗಿದ್ದು, ಜನರ ನಾಡಿಮಿಡಿತ ತಿಳಿದಿದೆ. ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯನ್ನು ವಿಭಜಿಸಲು ನಿರ್ಧರಿಸಲಾಗಿತ್ತು. ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪ್ರಭಾವದಿಂದ ಆಗ ಜಿಲ್ಲಾ ವಿಭಜನೆ ಆಗಿರಲಿಲ್ಲ. ಈಗ ಎಂಇಎಸ್ ಪ್ರಭಾವ ಕುಗ್ಗಿದೆ. ಜಿಲ್ಲಾ ವಿಭಜನೆ ಆಗಬೇಕು. ಇದಕ್ಕಾಗಿ ಪಕ್ಷಾತೀತವಾಗಿ ಇಲ್ಲಿನ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿ ಬಳಿಗೆ ಕರೆದೊಯ್ಯುವೆ. ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ, ಅಂಜಲಿ ನಿಂಬಾಳ್ಕರ್ ಯಾರೇ ಬಂದರೂ ನಿಯೋಗದಲ್ಲಿ ಕರೆದೊಯ್ಯುವೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.