ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಲು ಕೋರಿ ಶೀಘ್ರ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 26 ಮೇ 2020, 15:49 IST
Last Updated 26 ಮೇ 2020, 15:49 IST

ಬೆಳಗಾವಿ: ‘ಮಾರಕ ರೋಗ ಕೋವಿಡ್‌–19 ಸೋಂಕಿನ ಭೀತಿಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಒತ್ತಡಕ್ಕೆ ಒಳಗಾಗಿದ್ದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಕೋರಿ ಸದ್ಯದಲ್ಲಿಯೇ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸುತ್ತೇನೆ’ ಎಂದು ಇಲ್ಲಿನ ಮರಾಠಾ ಮಂಡಳ ಎಜ್ಯುಕೇಷನ್‌ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷೆ ರಾಜಶ್ರೀ ಹಲಗೇಕರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಲಾಕ್‌ಡೌನ್‌ದಿಂದಾಗಿ ಮುಂದೂಡಿಕೆಯಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜೂನ್‌ 25ರಿಂದ ಜುಲೈ 4ರವರೆಗೆ ನಡೆಸಲು ಸರ್ಕಾರ ಮುಂದಾಗಿದೆ. ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆಗಳನ್ನು ರದ್ದುಪಡಿಸಬೇಕೆನ್ನುವುದು ನಮ್ಮ ಬೇಡಿಕೆ. ಜೂನ್‌ 1ರಿಂದ ಹೈಕೋರ್ಟ್‌ ಕಾರ್ಯಾರಂಭಿಸಲಿದ್ದು, ಆಗ ಪಿಐಎಲ್‌ ಸಲ್ಲಿಸುವೆ’ ಎಂದರು.

‘ಪರೀಕ್ಷೆಯ ದಿನಗಳಂದು ಪಾಲಕರೂ ಪರೀಕ್ಷಾ ಕೇಂದ್ರಗಳಿಗೆ ಬರುವುದು ವಾಡಿಕೆ. ವಿದ್ಯಾರ್ಥಿಗಳ ಜೊತೆ ಪಾಲಕರನ್ನೂ ಸೇರಿಸಿದರೆ 16 ಲಕ್ಷಕ್ಕೂ ಹೆಚ್ಚು ಜನರು ಪರೀಕ್ಷೆಯ ದಿನದಂದು ಬೀದಿಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ವಿದ್ಯಾರ್ಥಿಗಳ ಸುರಕ್ಷತೆ ನಮಗೆ ಮುಖ್ಯವಾಗಬೇಕು ಹೊರತು, ಅಂಕಗಳಲ್ಲ’ ಎಂದು ಹೇಳಿದರು.

ADVERTISEMENT

‘ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಪರೀಕ್ಷೆಗಳನ್ನು ರದ್ದು ಮಾಡಿ, ಇಂಟರನಲ್‌ ಹಾಗೂ ಕ್ಲಾಸ್‌ ಟೆಸ್ಟ್‌ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕ ನೀಡಿದ್ದಾರೆ. ಇದೇ ಮಾದರಿಯನ್ನು ನಮ್ಮಲ್ಲೂ ಅನುಸರಿಸಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.