ADVERTISEMENT

ರಸ್ತೆ ಪಕ್ಕ ವಾಹನ ನಿಲ್ಲಿಸಿದರೆ ದಂಡ: ಪಾಲಿಕೆ ದೃಢ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 3:03 IST
Last Updated 13 ನವೆಂಬರ್ 2025, 3:03 IST
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಪರಿಷತ್‌ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ಮಾತನಾಡಿದರು  ಪ್ರಜಾವಾಣಿ ಚಿತ್ರ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಪರಿಷತ್‌ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ಮಾತನಾಡಿದರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರದಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ವಾಣಿಜ್ಯ ಮಳಿಗೆ ಸೇರಿದಂತೆ ಯಾವುದೇ ಸ್ಥಳದಲ್ಲಿ ರಸ್ತೆ ಪಕ್ಕ ವಾಹನ ನಿಲ್ಲಿಸಿದರೆ ಅಂಥ ಸಂಸ್ಥೆಗಳಿಗೆ ದಂಡ ಹಾಕಬೇಕು. ಫುಟ್‌ಪಾತ್‌ ಅತಿಕ್ರಮಣ ತೆರವು ಹಾಗೂ ಬೇಕಾಬಿಟ್ಟಿ ವಾಹನ ನಿಲುಗಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಪಾಲಿಕೆ ಪರಿಷತ್‌ನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಮೇಯರ್‌ ಮಂಗೇಶ್ ಪವಾರ ಅಧ್ಯಕ್ಷತೆಯಲ್ಲಿ ಪಾಲಿಕೆ ಪರಿಷತ್‌ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ, ಆಡಳಿತ ಗುಂಪು, ವಿರೋಧಿ ಬಣ ಹಾಗೂ ನಾಮನಿರ್ದೇಶಿತ ಸದಸ್ಯರೆಲ್ಲರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ನಗರದಲ್ಲಿ ಸಂಚಾರ– ಸಂಕಟಮಯವಾದ ಬಗ್ಗೆ ಇದೇ ಮೊದಲಬಾರಿ ಆರೋಗ್ಯಯುತ ಚರ್ಚೆ ನಡೆಯಿತು. ಮುಖ್ಯ ರಸ್ತೆಗಳು, ಅಡ್ಡರಸ್ತೆಗಳು, ವಾಣಿಜ್ಯ ಸ್ಥಳ, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಎಲ್ಲೆಲ್ಲಿ ರಸ್ತೆ ಮೇಲೆ ವಾಹನ ನಿಲ್ಲಿಸಲಾಗುತ್ತಿದೆ ಎಂಬುದನ್ನು ಬಹುಪಾಲು ಸದಸ್ಯರು ಎಳೆಎಳೆಯಾಗಿ ಬಿಚ್ಚಿಟ್ಟರು.

ADVERTISEMENT

ಪಾಲಿಕೆ ಸದಸ್ಯ ಸಂದೀಪ್ ಜೀರಗ್ಯಾಳ ಈ ಗಮನಾರ್ಹ ಚರ್ಚೆಗೆ ನಾಂದಿ ಹಾಡಿದರು. ‘ಬೆಳಗಾವಿ ಪಾಲಿಕೆಗೆ 175 ವರ್ಷಗಳು ತುಂಬುತ್ತಿವೆ. ಒಂದು ಕಾಲದಲ್ಲಿ ಕೇವಲ 3 ಲಕ್ಷ ಜನಸಂಖ್ಯೆ ಇತ್ತು, ಈಗ 7 ಲಕ್ಷ ದಾಟಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಒದಗಿಸಿದ್ದೇವೆಯೇ ಎಂಬ ಪ್ರಶ್ನೆಯನ್ನು ನಾವೇ ಮಾಡಿಕೊಳ್ಳಬೇಕು. ಜನಸಂಖ್ಯೆಗೆ ತಕ್ಕಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸಂಚಾರ ನಿಯಮ ಉಲ್ಲಂಘನೆ, ಬೇಕಾಬಿಟ್ಟಿ ಪಾರ್ಕಿಂಗ್, ಅತಿಕ್ರಮಣದ ಕಾರಣ ಅಪಘಾತಗಳೂ ಹೆಚ್ಚುತ್ತಿವೆ. ಇದೊಂದು ಗಂಭೀರ ಸಮಸ್ಯೆ’ ಎಂದರು.

‘ಮನೆ ನಿರ್ಮಾಣ ಮಾಡಲು ಅನುಮತಿ ಕೊಡುವಾಗಲೇ ಪಾರ್ಕಿಂಗ್‌ ಜಾಗ ಕಡ್ಡಾಯ ಮಾಡಬೇಕು. ಇಲ್ಲದಿದ್ದರೆ ಎಲ್ಲರೂ ಮನೆಗಳ ಮುಂದೆಯೇ ವಾಹನ ನಿಲ್ಲಿಸುತ್ತಾರೆ. ಇದರಿಂದ ರಸ್ತೆ ವಿಸ್ತರಣೆ ಮಾಡಿ ಏನು ಪ್ರಯೋಜನವಾಯಿತು’ ಎಂದೂ ಸಂದೀಪ್ ಪ್ರಶ್ನೆ ಮಾಡಿದರು.

‘ಬಹುಮಹಡಿ ಕಟ್ಟಡಗಳಲ್ಲಿ ಪಾರ್ಕಿಂಗ್‌ ಸೆಲ್ಲಾರ್ ಮಾಡಲಾಗಿದ್ದರೂ ಅದನ್ನು ಹೋಟೆಲ್‌, ಗೋದಾಮು ಮಾಡಲು ಬಳಸಲಾಗುತ್ತಿದೆ. ವಾಹನಗಳನ್ನು ಕಟ್ಟಡದ ಮುಂದೆ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಮಾಡಲಾಗುತ್ತಿದೆ. ಇಂಥವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಅವರು ‍ಪೊಲೀಸರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ‘ಶಾಲೆ, ಕಾಲೇಜು, ಆಸ್ಪತ್ರೆ, ಬಹುಮಹಡಿ ಕಟ್ಟಡಗಳೂ, ಮನೆಗಳೂ ಸೇರಿದಂತೆ ಎಲ್ಲೆಲ್ಲಿ ರಸ್ತೆ– ಫುಟ್‌ಪಾತ್‌ ಮೇಲೆ ವಾಹನ ನಿಲ್ಲಸಲಾಗುತ್ತದೆಯೋ ಅವುಗಳಿಗೆ ನೋಟಿಸ್‌ ನೀಡಿ. ದಂಡ ಹಾಕಿರಿ. ಈ ಬಗ್ಗೆ ಜಾಗೃತಿಯನ್ನು ಮೂಡಿಸಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಫುಟ್‌ಪಾತ್‌ ಅತಿಕ್ರಮಣ ತೆರವು ವಾಹನ ನಿಲುಗಡೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ. ಪಾಲಿಕೆ ಸದಸ್ಯರೇ ಇದಕ್ಕೆ ಸಹಕರಿಸಬೇಕು
ಜ್ಯೋತಿಬಾ ನಿಕ್ಕಂ, ಎಸಿಪಿ ಸಂಚಾರ ಠಾಣೆ

ಈ ವೇಳೆ ಮಾತನಾಡಿದ ಇನ್ನೊಬ್ಬ ಸದಸ್ಯ ಸಂತೋಷ, ‘ರಾಮಲಿಂಗ ಖಿಂಡ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿ 60 ಫೀಟ್‌ ರಸ್ತೆ ಮಾಡಲಾಗಿದೆ. ಆದರೆ, ಇದು ಅನಧಿಕೃತ ಪಾರ್ಕಿಂಗ್‌ ಸ್ಥಳವಾಗಿ ಬದಲಾಗಿದೆ. ಇಷ್ಟೆಲ್ಲ ದುಡ್ಡು ಸುರಿದು, ಜನರ ಆಸ್ತಿ ಒಡೆದು ರಸ್ತೆ ವಿಸ್ತರಣೆಯನ್ನು ಯಾವ ಪುರುಷಾರ್ಥಕ್ಕೆ ಮಾಡಲಾಯಿತು?’ ಎಂದು ಖಾರವಾಗಿ ಪ್ರಶ್ನಿಸಿದರು.

ಸದಸ್ಯರಾದ ಶಂಕರ ಪಾಟೀಲ ಹಾಗೂ ಸೋಹೇಲ್ ಸಂಗೊಳ್ಳಿ ಮಾತನಾಡಿ, ‘ಗೋಂಧಳಿ ಗಲ್ಲಿ, ಕೇಳ್ಕರ್‌ಭಾಗ ಸೇರಿದಂತೆ ಇಡೀ ನಗರದಲ್ಲಿ ಇದೇ ರೀತಿ ಅದ್ವಾಣವಿದೆ’ ಎಂದರು.

ಕೋಟೆ ಕೆರೆಯಲ್ಲಿ ಈಗಾಗಲೇ ₹8.2 ಕೋಟಿ ಮೂಲಸೌಕರ್ಯ ಕಾಮಗಾರಿ ಮಾಡಲಾಗಿದೆ. ತಿನಿಸುಕಟ್ಟೆ ನಿರ್ಮಾಣದ ಪ್ರಸ್ತಾವ ಪರಿಗಣಿಸಲಾಗುವುದು
ಬಿ.ಶುಭ, ಪಾಲಿಕೆ ಆಯುಕ್ತೆ

‘ಕಾಲೇಜು ರಸ್ತೆ, ರಾಮಲಿಂಗ ಖಿಂಡ ಗಲ್ಲಿ, ಕೆಎಲ್‌ಇ ರಸ್ತೆ, ಖಾನಾಪುರ ರಸ್ತೆ ಸೇರಿದಂತೆ ಎಲ್ಲ ಕಡೆ ಪಾರ್ಕಿಂಗ್‌ ಮಾರ್ಕ್‌ ಮಾಡಿರಿ. ಅದನ್ನು ದಾಟಿ ವಾಹನ ನಿಲ್ಲಿಸಿದವರಿಗೆ ದಂಡ ಹಾಕಿ. ಈ ಸಂಬಂಧ ಪಾಲಿಕೆ, ಪೊಲೀಸ್‌ ಇಲಾಖೆ, ಲೋಕೋಯೋಗಿ ಇಲಾಖೆ, ಬುಡಾ ಹಾಗೂ ಕಂಟೊನ್ಮೆಂಟ್‌ ಬೋರ್ಡ್‌ ಅಧಿಕಾರಿಗಳ ಜಂಟಿ ಸಭೆ ಕರೆದು, ಮತ್ತೊಮ್ಮೆ ಸುದೀರ್ಘ ಚರ್ಚೆ ಮಾಡಬೇಕು’ ಎಂದು ನಿರ್ದೇಶನ ನೀಡಿದ ಮೇಯರ್‌ ಚರ್ಚೆಗೆ ತೆರೆ ಎಳೆದರು.

₹217 ಕೋಟಿ ಆಡಿಟ್ ಆಕ್ಷೇಪಣೆ

ಸಭೆಯ ಆರಂಭಕ್ಕೆ ಗಂಭೀರ ಪ್ರಶ್ನೆ ಎತ್ತಿದ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ‘ಪಾಲಿಕೆಯಲ್ಲಿ ₹217 ಕೋಟಿ ಆಡಿಟ್ ಆಕ್ಷೇಪಣೆ ಬಂದಿದೆ. ಇದಕ್ಕೆ ಕಾರಣವೇನು? ಇದರ ದಾಖಲೆಗಳು ಇಲ್ಲವೇ? ಒಂದು ವೇಳೆ ಸರಿಯಾದ ಉತ್ತರ ನೀಡದಿದ್ದರೆ ಇದನ್ನು ದೊಡ್ಡ ಹಗರಣ ಎಂದು ಪರಿಗಣಿಸಬೇಕಾಗುತ್ತದೆ’ ಎಂದು ಖಾರವಾಗಿ ಪ್ರಶ್ನಿಸಿದರು. ‘2014ರಿಂದ 2021ರವರೆಗಿನ ಅವಧಿಯಲ್ಲಿ ಆಡಿಟ್ ಆಕ್ಷೇಪಣೆ ವರದಿ ಇದ್ದರೂ ಅಧಿಕಾರಿಗಳು ಏಕೆ ಇದನ್ನು ಸರಿಪಡಿಸಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ಆಡಿಟ್ ಅಧಿಕಾರಿ ‘ಸರಿಯಾದ ದಾಖಲೆ ಇಲ್ಲವೆಂದು ಆಕ್ಷೇಪಣೆ ಮಾಡಿದ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೂ ನೋಟಿಸ್ ನೀಡಲಾಗಿದೆ’ ಎಂದರು. ಮಧ್ಯ ಪ್ರವೇಶಿಸಿದ ಮೇಯರ್‌ ‘ಎರಡು ತಿಂಗಳಲ್ಲಿ ಆಡಿಟ್ ವರದಿ ಸರಿಪಡಿಸಬೇಕು. ಇಲ್ಲವಾದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮತ್ತು ಲೋಕಾಯುಕ್ತರಿಗೆ ಪತ್ರ ಬರೆಯಲಾಗುವುದು’ ಎಂದು ತಾಕೀತು ಮಾಡಿದರು.

14 ಲಕ್ಷಕ್ಕೂ ಹೆಚ್ಚು ವಾಹನ ಓಡಾಟ

‘ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕು ಸೇರಿ 14 ಲಕ್ಷಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿವೆ. ಸಾಧ್ಯವಾದಷ್ಟು ದಟ್ಟಣೆ ನಿಯಂತ್ರಣ ಅತಿಕ್ರಮಣ ತೆರವು ದಂಡ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಶಾಲೆ– ಕಾಲೇಜುಗಳ ಮುಂದೆ ವಾಹನ ನಿಲುಗಡೆ ಮಾಡದಂತೆ ಕ್ರಮ ವಹಿಸಲಾಗುವುದು’ ಎಂದು ಸಂಚಾರ ಠಾಣೆ ಎಸಿಪಿ ಜ್ಯೋತಿಬಾ ನಿಕ್ಕಂ ಉತ್ತರಿಸಿದರು. ‘ಸಂಚಾರ ದಟ್ಟಣೆ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಅಧ್ಯಯನ ಮಾಡಲು ಬೆಂಗಳೂರಿನಿಂದ ಎಂಜಿನಿಯರ್‌ಗಳ ತಂಡ ಕರೆಸಲಾಗಿದೆ. ಅವರ ವರದಿ ಆಧರಿಸಿ ಮುಂದಿನ ಕ್ರಮ ವಹಿಸಲಾಗುವುದು. ಆಗ ಇನ್ನಷ್ಟು ಸುಲಭ ಸಂಚಾರ ಸಾಧ್ಯವಾಗಲಿದೆ’ ಎಂದರು.

‘ಕೋಟೆ ಕೆರೆ ಬಳಿ ತಿನಿಸುಕಟ್ಟೆ ಮಾಡಿ’

ವಿಪಕ್ಷ ಗುಂಪಿನ ಸದಸ್ಯೆ ರೇಷ್ಮಾ ಬೈರಕದಾರ ಮಾತನಾಡಿ ‘ಖಾವ್ ಕಟ್ಟಾ ರೀತಿಯಲ್ಲೇ ಕೋಟೆ ಕೆರೆಯ ಸುತ್ತಲೂ ತಿನಿಸುಕಟ್ಟೆ ನಿರ್ಮಿಸಬೇಕು. ಇದರಿಂದ ಕೆರೆಯ ಮನರಂಜನೆ ಜತೆಗೆ ತಿನಿಸುಗಳಿಂದ ಆದಾಯವೂ ಬರುತ್ತದೆ. ಶೇ 20ಕ್ಕೂ ಹೆಚ್ಚು ಆದಾಯ ಇಲ್ಲಿಂದಲೇ ಸಂಗ್ರಹಿಸಲು ಸಾಧ್ಯ. ಹಿಂದಿನ ಶಾಸಕ ಫಿರೋಜ್‌ ಸೇಠ್‌ ಅವರು ಅದಕ್ಕೆ ಮುಂದಡಿ ಇಟ್ಟಿದ್ದರು. ಇದೂವರೆಗೆ ಮತ್ತೇನೂ ಆಗಿಲ್ಲ ಏಕೆ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ಬಿ.ಶುಭ ‘ಈಗಾಗಲೇ ನಾಲ್ಕು ಆಹಾರ ಮಳಿಗೆ ನಿರ್ಮಿಸಲಾಗಿದೆ. ಖಾವ ಕಟ್ಟಾ ರೀತಿ ಮಾಡಲು ಜಿಲ್ಲಾಧಿಕಾರಿ ಅವರಿಂದ ಅನುಮತಿ ಪಡೆಯಬೇಕು. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

ನಮ್ಮನ್ನು ಹೊರಗೆ ಹಾಕ್ರಿ’

₹217 ಕೋಟಿ ಆಡಿಟ್‌ ಆಗದಿರುವ ಬಗ್ಗೆ ಚರ್ಚೆ ಮುಗಿದ ಬಳಿಕ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕೆ ಮತ್ತೆ ಪ್ರಶ್ನೆ ಎತ್ತಿದರು. ಅಡ್ಡಬಂದ ರವಿ ಧೋತ್ರೆ ‘ಒಮ್ಮೆ ಗೊತ್ತುವಳಿ ಮಂಡಿಸಿದ ಮೇಲೆ ಮತ್ತೆ ಚರ್ಚೆಗೆ ಅವಕಾಶವಿಲ್ಲ’ ಎಂದು ತಕರಾರು ತೆಗೆದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಹಣಮಂತ ಕೊಂಗಾಲಿ ‘ಪಾಲಿಕೆಯ ನಿಯಮ ಪಾಲನೆ ಮಾಡದಿದ್ದರೆ ಯಾರನ್ನಾದರೂ ಸಭೆಯಿಂದ ಹೊರಹಾಕಲು ಅವಕಾಶವಿದೆ’ ಎಂದು ಮೇಯರ್‌ಗೆ ನೆನಪಿಸಿದರು. ಇದರಿಂದ ಸಿಟ್ಟಿಗೆದ್ದ ರಮೇಶ ಸೊಂಟಕ್ಕಿ ‘ಹಾಗಾದರೆ ನಮ್ಮನ್ನು ಹೊರಗೆ ಹಾಕಿ ಬಿಡ್ರಿ. ನೀವಷ್ಟೇ ಚರ್ಚೆ ಮಾಡಿಕೊಳ್ಳಿರಿ’ ಎಂದರು. ಇದಕ್ಕೆ ವಿರೋಧಿ ಗುಂಪಿನ ಸದಸ್ಯರೂ ರೊಚ್ಚಿಗೆದ್ದರು. ಇದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.