ADVERTISEMENT

ಕನ್ನಡ ಶಾಲೆಗಳಿಗೆ ಸೌಕರ್ಯ ನೀಡಿ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 14:59 IST
Last Updated 8 ಮಾರ್ಚ್ 2019, 14:59 IST
ವಿಶ್ವ ಕನ್ನಡ ಬಳಗ ಆಯೋಜಿಸಿದ್ದ ಕನ್ನಡ ಜಾನಪದ ಸಾಂಸ್ಕೃತಿಕ ಹಾಗೂ ದೇಸಿ ಕ್ರೀಡೆಗಳ ತೃತೀಯ ಸಮ್ಮೇಳನದಲ್ಲಿ ಶಾಸಕ ಜಗದೀಶ ಶೆಟ್ಟರ್ ಮಾತನಾಡಿದರು– ಪ್ರಜಾವಾಣಿ ಚಿತ್ರ
ವಿಶ್ವ ಕನ್ನಡ ಬಳಗ ಆಯೋಜಿಸಿದ್ದ ಕನ್ನಡ ಜಾನಪದ ಸಾಂಸ್ಕೃತಿಕ ಹಾಗೂ ದೇಸಿ ಕ್ರೀಡೆಗಳ ತೃತೀಯ ಸಮ್ಮೇಳನದಲ್ಲಿ ಶಾಸಕ ಜಗದೀಶ ಶೆಟ್ಟರ್ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ನೀಡಬೇಕು. ಕನ್ನಡ ಶಾಲೆಗಳು ಉಳಿದರೆ ಭಾಷೆಯೂ ಉಳಿಯುತ್ತದೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ವಿಶ್ವ ಕನ್ನಡ ಬಳಗ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಜಾನಪದ ಸಾಂಸ್ಕೃತಿಕ ಹಾಗೂ ದೇಸಿ ಕ್ರೀಡೆಗಳ ತೃತೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ ಬಳಕೆಯನ್ನು ಹೆಚ್ಚಾಗಬೇಕು. ಪ್ರತಿಯೊಬ್ಬರೂ ಕನ್ನಡ ಮಾತನಾಡಿದಾಗ ಅದರ ಮಹತ್ವವೂ ಹೆಚ್ಚಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಪ್ರಭಾವವೇ ಹೆಚ್ಚಾಗಿದ್ದು, ಕನ್ನಡ ಭಾಷೆಯನ್ನು ಹುಡುಕಬೇಕಾದ ಸ್ಥಿತಿ ಇದೆ. ಆದರೆ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಗಂಡು ಮೆಟ್ಟಿನ ನಾಡು ಎಂದೇ ಕರೆಯಿಸಿಕೊಳ್ಳುವ ಈ ಭಾಗದ ಎಲ್ಲ ಜಿಲ್ಲೆಗಳಲ್ಲಿ ಶುದ್ಧ ಕನ್ನಡ ಉಳಿದಿದೆ. ಭಾಷೆ ಮತ್ತು ಸಂಸ್ಕೃತಿಗೆ ಇನ್ನಷ್ಟು ಆದ್ಯತೆ ನೀಡಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.

ADVERTISEMENT

ಆಚರಣೆಗೆ ಸೀಮಿತವಾಗದಿರಲಿ: ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ ಸ್ತ್ರೀ ಸಬಲೀಕರಣಕ್ಕೆ ಪ್ರೇರಣೆ ನೀಡಬೇಕು. ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಸಮಾನ ಅವಕಾಶ ನೀಡಬೇಕು. ತಮ್ಮ ಸಾಮರ್ಥ್ಯ– ಹಕ್ಕುಗಳ ಬಗ್ಗೆ ಮಹಿಳೆಯರಲ್ಲಿಯೂ ಜಾಗೃತಿ ಮೂಡಬೇಕು. ಸರ್ಕಾರ ಸಹ ಮಹಿಳೆಯರ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅವರು ಹೇಳಿದರು.

ವಿಶ್ವ ಕನ್ನಡ ಬಳಗ ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಎಸ್‌.ವಿ. ಚಿಕ್ಕಮಠ ಅವರು ‘ಕನ್ನಡ ನಾಡು ನುಡಿ’ ವಿಷಯ ಕುರಿತು ಉಪನ್ಯಾಸ ನೀಡಿದರು. ವೆಂಕಪ್ಪ ಹುಲಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರು, ಅಖಿಲ ಕರ್ನಾಟಕ ಅಯ್ಯಪ್ಪಸ್ವಾಮಿ ಸೇವಾ ಸೈನ್ಯದ ರಾಜ್ಯ ಘಟಕದ ಅಧ್ಯಕ್ಷ ಮೋಹನ ಗುರುಸ್ವಾಮಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ, ಡಾ. ವಿ.ಪಿ ದಂಡಿನ್ ಐಟಿಐ ಕಾಲೇಜಿನ ಮುಖ್ಯೋಪಾಧ್ಯಾಯ ಹರ್ಷ ವಿಲ್ಸನ್ ಮಾಲೆಕರ್, ಬಸವರಾಜ ಬೆನ್ನೂರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.