ADVERTISEMENT

ವಿಜಯಪುರ: ನೋಡಬನ್ನಿ ಸಂವಿಧಾನ ಮೂಲ ಪ್ರತಿ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸಂಗ್ರಹ

ಬಸವರಾಜ ಸಂಪಳ್ಳಿ
Published 25 ನವೆಂಬರ್ 2020, 10:28 IST
Last Updated 25 ನವೆಂಬರ್ 2020, 10:28 IST
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್ ‌ಭವನದಲ್ಲಿ ಸಂರಕ್ಷಿಸಿ ಇಡಲಾಗಿರುವ ಭಾರತದ ಸಂವಿಧಾನದ ಮೂಲ ಪ್ರತಿ 
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್ ‌ಭವನದಲ್ಲಿ ಸಂರಕ್ಷಿಸಿ ಇಡಲಾಗಿರುವ ಭಾರತದ ಸಂವಿಧಾನದ ಮೂಲ ಪ್ರತಿ    

ವಿಜಯಪುರ: ಭಾರತದ ಸಂವಿಧಾನದ ಮೂಲ ಪ್ರತಿಯನ್ನು ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನೋಡಬಹುದಾಗಿದೆ.

ಹೌದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಕೈ ಬರಹದಲ್ಲಿರುವ ಮೂಲ ಪ್ರತಿಯ ಡಿಜಿಟಲ್‌ ಪ್ರತಿಯನ್ನು ವಿಶ್ವವಿದ್ಯಾಲಯದ ಅಂಬೇಡ್ಕರ್‌ ಭವನದಲ್ಲಿ ಸಂರಕ್ಷಿಸಿ ಇಡಲಾಗಿದೆ.

ಭವನದ ಒಳ ಆವರಣದಲ್ಲಿ ಸಂವಿಧಾನ ಮೂಲ ಪ್ರತಿಯನ್ನು ಗಾಜಿನ ಪೆಟ್ಟಿಗೆಯೊಂದರಲ್ಲಿ ಇಡಲಾಗಿದ್ದು, ಅದರ ಬಳಿ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಸಹ ಇಡಲಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಆದರೆ, ಸಂರಕ್ಷಣೆಯ ಉದ್ದೇಶದಿಂದ ಯಾರಿಗೂ ಕೈಯಿಂದ ಮುಟ್ಟಲು ಅವಕಾಶವಿಲ್ಲ.

ADVERTISEMENT

ಸಂವಿಧಾನ ಮೂಲ ಪ್ರತಿಯನ್ನು ವಿಶ್ವವಿದ್ಯಾಲಯಕ್ಕೆ ತರುವಲ್ಲಿ ಶ್ರಮ ವಹಿಸಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಹಾಲಿ ನಿರ್ದೇಶಕ ಡಾ. ಸಕ್ಪಾಲ್‌ ಹೂವಣ್ಣ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ವಿಶ್ವದ ಅತಿ ದೊಡ್ಡ ಮತ್ತು ಲಿಖಿತ ಸಂವಿಧಾನವಾದ ಭಾರತದ ಸಂವಿಧಾನದ ಮೂಲ ಪ್ರತಿಯನ್ನು ಟೈಪ್‌ ಮಾಡಿಲ್ಲ, ಮುದ್ರಿತವೂ ಅಲ್ಲ. ಅದನ್ನು ಕೈಯಿಂದ ಬರೆಯಲಾಗಿದೆ. ಇಂದಿಗೂ ಸಂವಿಧಾನದ ಮೂಲ ಪ್ರತಿಯನ್ನು ಭಾರತದ ಸಂಸತ್ತಿನ ಗ್ರಂಥಾಲಯದಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಈ ಮೂಲ ಪ್ರತಿಯ ಡಿಜಿಟಲ್‌ ಪ್ರತಿಯನ್ನು ದೇಶದ ವಿವಿಧೆಡೆ ಇಡಲಾಗಿದ್ದು, ಅದರಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವೂ ಒಂದಾಗಿರುವುದು ವಿಶೇಷ ಎಂದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಸಂವಿಧಾನದ ಬಗ್ಗೆ ಹಾಗೂ ಅದರ ಓದಿನ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಉದ್ದೇಶದಿಂದ ಮೂಲ ಪ್ರತಿಯನ್ನು ಅಂದಿನ ಕುಲಪತಿ ಸಬಿಹಾ ಭೂಮಿಗೌಡ ಅವರ ವಿಶೇಷ ಆಸಕ್ತಿ ಮೇರೆಗೆ ತರಿಸಿ ಇಡಲಾಗಿದೆ ಎಂದು ಹೇಳಿದರು.

ಹಿರಿಯ ರಾಜಕೀಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಸಚಿವರಾಗಿದ್ದಾಗ ಅವರ ಸಹಕಾರದೊಂದಿಗೆ ಕೇಂದ್ರ ಸಂಸ್ಕೃತಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡುವ ಮೂಲಕ ಸಂವಿಧಾನ ಮೂಲ ಪ್ರತಿಯನ್ನು ವಿಶ್ವವಿದ್ಯಾಲಯಕ್ಕೆ ತರಿಸಲಾಯಿತು ಎಂದು ತಿಳಿಸಿದರು.

2019ರಲ್ಲಿ ಮೂಲ ಪ್ರತಿ ವಿಶ್ವವಿದ್ಯಾಲಯಕ್ಕೆ ಬಂದಿದೆ. ಅಂಬೇಡ್ಕರ್‌ ಜಯಂತಿ, ಗಣರಾಜ್ಯೋತ್ಸವ ಮತ್ತು ಸಂವಿಧಾನ ದಿನದಂದು ಪ್ರತಿಯನ್ನು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಪ್ರತಿ ಪುಟವನ್ನು ಬಿಚ್ಚಿ ತೋರಿಸಲಾಗುತ್ತದೆ. ಉಳಿದ ದಿನಗಳಂದು ಪ್ರದರ್ಶನ ಮಾತ್ರ ಇರುತ್ತದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ ಸೇರಿದಂತೆಸಂವಿಧಾನ ಕರಡು ಸಮಿತಿಯ ಎಲ್ಲ 284 ಸದಸ್ಯರ ಸಹಿ ಈ ಮೂಲ ಪ್ರತಿಯಲ್ಲಿ ಇದೆ ಎಂದು ತಿಳಿಸಿದರು.

****

ಸಂವಿಧಾನದ ಆಶಯವನ್ನು ಈ ಭಾಗದ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ತಿಳಿಸುವ ಮತ್ತು ಪ್ರಚುರ ಪಡಿಸುವ ಉದ್ದೇಶದಿಂದ ಮೂಲ ಪ್ರತಿಯನ್ನು ವಿಶ್ವವಿದ್ಯಾಲಯದಲ್ಲಿ ಇರಿಸಲಾಗಿದೆ
ಡಾ.ಓಂಕಾರ ಕಾಕಡೆ, ಪ್ರಭಾರ ಕುಲಪತಿ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.