ADVERTISEMENT

ಪ್ರತಿ ಜಿಲ್ಲೆಯಲ್ಲೊಂದು ಕೈಗಾರಿಕಾ ಪಾರ್ಕ್‌: ನಿರಾಣಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 16:41 IST
Last Updated 29 ಸೆಪ್ಟೆಂಬರ್ 2021, 16:41 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ    

ಬೆಳಗಾವಿ: ‘ಒಂದು ಜಿಲ್ಲೆ ಒಂದು ಉತ್ಪಾದನೆ’ ಕಾರ್ಯಕ್ರಮದಲ್ಲಿ ಪ್ರತಿ ಜಿಲ್ಲೆಯಲ್ಲೊಂದು ಕೈಗಾರಿಕಾ ಪಾರ್ಕ್‌ ಮಾಡಲಾಗುವುದು’ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್‌ ಮಾಡಲಾಗುತ್ತಿದೆ. ಅಲ್ಲಿಗೆ ಕೇಂದ್ರ ಸರ್ಕಾರ ₹ 1ಸಾವಿರ ಕೋಟಿ ಕೊಡುತ್ತಿದೆ. 3ಸಾವಿರ ಎಕರೆ ಸ್ವಾಧೀನಪಡಿಸಿಕೊಂಡಿದ್ದು, ಅಭಿವೃದ್ಧಿಪಡಿಸುತ್ತಿದ್ದೇವೆ. ಅಲ್ಲಿ 80ಕ್ಕೂ ಹೆಚ್ಚು ಔಷಧಿ ಕಂಪನಿಗಳ ಕೈಗಾರಿಕೆಗಳು ಬರಲಿವೆ. ಇದರಿಂದ ಆ ಭಾಗದ ಜನರಿಗೆ ಉದ್ಯೋಗ ಸಿಗಲಿದೆ’ ಎಂದು ಹೇಳಿದರು.

‘ಕಲಬುರ್ಗಿಯಲ್ಲಿ ಜವಳಿ ಮತ್ತು ಜ್ಯುವೆಲ್ಲರಿ ಪಾರ್ಕ್‌, ಹುಬ್ಬಳ್ಳಿ–ಧಾರವಾಡದಲ್ಲಿ ಐಟಿ ಪಾರ್ಕ್‌, ತುಮಕೂರು ಮತ್ತು ಧಾರವಾಡದಲ್ಲಿ ಕೈಗಾರಿಕಾ ಕಾರಿಡಾರ್ ಮಾಡಲಾಗುತ್ತಿದೆ. ಪ್ರತಿ ಕಾರಿಡಾರ್‌ಗೆ ಕೇಂದ್ರ ಸರ್ಕಾರ ತಲಾ ₹ 1ಸಾವಿರ ಕೋಟಿ ಅನುದಾನ ಕೊಡುತ್ತಿದೆ. ಕೈಗಾರಿಕೆಗಳ ಸಮಸ್ಯೆ ನಿವಾರಣೆಗಾಗಿ ಅ.11 ಮತ್ತು 12ರಂದು ಬೆಂಗಳೂರು ಅರಮನೆಯಲ್ಲಿ ಕೈಗಾರಿಕಾ ಅದಾಲತ್‌ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಎಂಜಿನಿಯರಿಂಗ್‌, ಎಂ.ಟೆಕ್. ಹಾಗೂ ಪಿಎಚ್‌ಡಿ ಪಡೆದವರು ಉದ್ಯೋಗಪತಿಗಳಾಗಬೇಕು ಎಂಬ ಉದ್ದೇಶದಿಂದ ಪ್ರೋತ್ಸಾಹ ನೀಡುವ ಕಾರ್ಯಕ್ರಮವನ್ನು ಇಲಾಖೆಯಿಂದ ನಡೆಸಲಾಗುವುದು. ಸೌಲಭ್ಯಗಳ ಬಗ್ಗೆ ತಿಳಿಸಿಕೊಡಲಾಗುವುದು. ಕಲಬುರ್ಗಿ, ಮೈಸೂರು, ಬೆಳಗಾವಿ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ ಹಾಗೂ ಮಂಗಳೂರಿನಲ್ಲಿ ತಲಾ 2 ದಿನಗಳ ಕಾರ್ಯಕ್ರಮ ನಡೆಯಲಿದೆ. ಸ್ವತಃ ಉದ್ಯಮ ಕಂಡುಕೊಳ್ಳುವಂತೆ ಅವರಿಗೆ ಪ್ರೇರಣೆ ನೀಡಲಾಗುವುದು. ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಲಾಗುವುದು. ಮಹಿಳಾ ಉದ್ಯಮಿಗಳಿಗೂ ಪ್ರೋತ್ಸಾಹ ಕೊಡಲಾಗುವುದು’ ಎಂದರು.

‘ನವೆಂಬರ್‌ 2022ರಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಬೆಂಗಳೂರಿನಲ್ಲಿ ನಡೆಸಲಾಗುವುದು. ₹ 10 ಲಕ್ಷ ಕೋಟಿ ಬಂಡವಾಳ ಆಕರ್ಷಿಸಲು ಹಾಗೂ 10 ಲಕ್ಷ ಮಂದಿಗೆ ಉದ್ಯೋಗ ಸಿಗುವಂತಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.