ADVERTISEMENT

ನ್ಯಾಯಾಲಯಗಳಿಗೆ ಮೂಲ ಸೌಲಭ್ಯ- ಸಚಿವೆ ಶಶಿಕಲಾ ಜೊಲ್ಲೆ

ವಕೀಲರ ಸಂಘ ಹಾಗೂ ಇ-ಗ್ರಂಥಾಲಯ ಕಟ್ಟಡ ಉದ್ಘಾಟನೆ: ಸಚಿವೆ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 8:01 IST
Last Updated 29 ಡಿಸೆಂಬರ್ 2021, 8:01 IST
ನಿಪ್ಪಾಣಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಹಾಗೂ ಇ-ಗ್ರಂಥಾಲಯದ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು
ನಿಪ್ಪಾಣಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಹಾಗೂ ಇ-ಗ್ರಂಥಾಲಯದ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು   

ನಿಪ್ಪಾಣಿ: ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗ ಈ ನಾಲ್ಕು ಸ್ತಂಭಗಳು ಸುಸಜ್ಜಿತ ಹಾಗೂ ಸುವ್ಯವಸ್ಥಿತವಾಗಿದ್ದಲ್ಲಿ ಸಮಾಜವು ಶಾಂತಿ, ನೆಮ್ಮದಿ, ಸುಖ-ಸಮಾಧಾನದಿಂದ ಸದೃಢವಾಗಿರುತ್ತದೆ. ನ್ಯಾಯ ನಡೆಯುವ ಪರಿಸರವೂ ಸಹ ಸುಸಜ್ಜಿತವಾಗಿರಬೇಕೆಂಬ ನಿಟ್ಟಿನಲ್ಲಿ ಇಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿದ್ದು, ಅವಶ್ಯಕ ಸೌಲಭ್ಯಗಳು ಬೇಕಾದಲ್ಲಿ ಅವುಗಳನ್ನು ಪೂರೈಸಲು ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಕಟಿಬದ್ಧರಾಗಿದ್ದೇವೆ’ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ಹಾಗೂ ಇ-ಗ್ರಂಥಾಲಯ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು. ನ್ಯಾಯವಾದಿಗಳ ಬೇಡಿಕೆಗೆ ಸ್ಪಂದಿಸಿ ಇಲ್ಲಿ ಒಂದು ಸುಸಜ್ಜಿತ ನ್ಯಾಯಾಲಯದ ಕಟ್ಟಡ ನಿರ್ಮಿಸಲಾಗಿದೆ ಎಂದರು.

ನೂರು ವರ್ಷಗಳ ಇತಿಹಾಸ ಹೊಂದಿರುವ ಮತ್ತು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಂದು ತಮ್ಮ ವಿಚಾರಗಳನ್ನು ಮಂಡಿಸಿರುವ ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ ₹32 ಕೋಟಿ ಕಾಮಗಾರಿ ಪ್ರಸ್ತಾವ ತಯಾರಿಸಿ ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಕಳುಹಿಸಿದ್ದು ಅದಕ್ಕೆ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದು ಹೇಳಿದರು.

ADVERTISEMENT

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಚಂದ್ರಶೇಖರ ಜೋಶಿ ಮಾತನಾಡಿ, ‘ನ್ಯಾಯಾಂಗದ ಅಡಿಯಲ್ಲಿ ಸೇವೆ ಸಲ್ಲಿಸುವಾಗ ಅನುಕೂಲಕರ ಪರಿಸರ ಜೊತೆಗೆ ಎಲ್ಲ ಸೌಲಭ್ಯಗಳು ಇರಬೇಕು. ಈ ದಿಶೆಯಲ್ಲಿ ನಗರವು ಮುಂಚೂಣಿಯಲ್ಲಿದೆ. ಸೌಲಭ್ಯಗಳ ವಿಷಯದಲ್ಲಿ ಚಿಕ್ಕೋಡಿಗಿಂತಲೂ ನಗರದ ನ್ಯಾಯಾಲಯವು ಮುಂದಿದೆ ಎಂದರು.

ಕ್ರಿಮಿನಲ್ ಪ್ರಕರಣಗಳು ಕಡಿಮೆ ಇದ್ದಲ್ಲಿ ಅಲ್ಲಿ ಸುಭಿಕ್ಷೆ ಇದ್ದಂತೆ. ಒಟ್ಟು 3 ನ್ಯಾಯಾಲಗಳನ್ನು ಹೊಂದಿರುವ ಇಲ್ಲಿ ಸುಮಾರು 3,300ರಷ್ಟು ಸಿವಿಲ್, 2,364 ಕ್ರಿಮಿನಲ್ ಪ್ರಕರಣಗಳಿವೆ. ಅವುಗಳಲ್ಲಿ 10 ವರ್ಷಕ್ಕೂ ಮೇಲ್ಪಟ್ಟ 242, 7 ವರ್ಷಕ್ಕೂ ಮೇಲ್ಪಟ್ಟ 525, 5 ವರ್ಷಕ್ಕೂ ಮೇಲ್ಪಟ್ಟ 550ಕ್ಕೂ ಅಧಿಕ ಪ್ರಕರಣಗಳಿವೆ. ತುಂಬ ಹಳೆಯ 1400ಕ್ಕೂ ಅಧಿಕ ಪ್ರಕರಣಗಳಿದ್ದು ಅವುಗಳನ್ನು ಆದ್ಯತೆ ಮೇಲೆ ಇತ್ಯರ್ಥಗಳಾಗುವಂತೆ ನ್ಯಾಯವಾದಿಗಳು ಪ್ರಯತ್ನಿಸಬೇಕು. ನಗರದಲ್ಲಿ 5 ವರ್ಷಗಳೊಳಗೆ ಪ್ರಕರಣಗಳು ಇತ್ಯರ್ಥಗೊಳ್ಳುತ್ತವೆ ಎನ್ನುವಂತಾಗಬೇಕು. ಇದನ್ನು ಸವಾಲಾಗಿ ತೆಗೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸ್ಥಳೀಯ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶ ಪ್ರೇಮಾ ಪವಾರ, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ ಉಪಾಧ್ಯಕ್ಷ ಕಲ್ಮೇಶ ಕಿವಡ, ಲೋಕೋಪಯೋಗಿ ಇಲಾಖೆ ಚಿಕ್ಕೋಡಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ವಿ.ಎನ್. ಪಾಟೀಲ, ಸ್ಥಳೀಯ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಎಂ. ಪಾಟೀಲ, ಉಪಾಧ್ಯಕ್ಷ ಶಿವಕುಮಾರ ಚೌಗುಲೆ, ಕಾರ್ಯದರ್ಶಿ ಎಂ.ಎ. ಸನದಿ ಇದ್ದರು.

ವಕೀಲೆ ಶೀತಲ ಮೆಕ್ಕಳಕಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರ್ಯದರ್ಶಿ ನಿಲೇಶ ಹತ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.