ಬೆಳಗಾವಿ: ‘ಹುಕ್ಕೇರಿ ತಾಲ್ಲೂಕಿನ ಇಂಗಳಿಯಲ್ಲಿ ಶನಿವಾರ ತೆಂಗಿನ ಮರಕ್ಕೆ ಶ್ರೀರಾಮ ಸೇನೆಯ ಐವರು ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಅವರಲ್ಲಿ ಒಬ್ಬ ಹಿಂದೂ ಮತ್ತು ಮೂವರು ಮುಸ್ಲಿಮರು ಇದ್ದಾರೆ. ಇದು ಕೋಮು ಸಂಘರ್ಷವಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಗಳಿಯಲ್ಲಿ ನಡೆದಿದ್ದು ದುರದೃಷ್ಟರ ಘಟನೆ. ಈ ಪ್ರಕರಣದಲ್ಲಿ ಯಾರೂ ದೂರು ದಾಖಲಿಸದ ಕಾರಣ, ಯಮಕನಮರಡಿ ಠಾಣೆಯಲ್ಲಿ ನಾವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಮನೆಗೆ ನುಗ್ಗಿ ದಾಂಧಲೆ ಮಾಡಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಐವರು ಕಾರ್ಯಕರ್ತರ ವಿರುದ್ಧ ಸಹ ದೂರು ದಾಖಲಾಗಿದೆ’ ಎಂದರು.
‘ಐದು ಹಸುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಜೂನ್ 26ರಂದು ಶ್ರೀರಾಮ ಸೇನೆ ಕಾರ್ಯಕರ್ತರು ತಡೆದು, ಹುಕ್ಕೇರಿ ಠಾಣೆಗೆ ತಂದಿದ್ದರು. ‘ಜಾತ್ರೆಯಲ್ಲಿ ಈ ಹಸು ಖರೀದಿಸಿ, ಸಾಕಾಣಿಕೆಗೆ ತಂದಿದ್ದೇವೆ’ ಎಂದು ಮಾಲೀಕರು ದಾಖಲೆ ನೀಡಿದರು. ‘ಸಂಶಯದ ಹಿನ್ನೆಲೆಯಲ್ಲಿ ನಾವು ಠಾಣೆಗೆ ಕರೆತಂದೆವು. ಈಗ ಯಾವುದೇ ತಕರಾರು ಇಲ್ಲ’ ಎಂದು ಶ್ರೀರಾಮ ಸೇನೆಯವರು ಬರೆದುಕೊಟ್ಟರು. ಹಾಗಾಗಿ ಬೆಳವಿಯ ಗೋಶಾಲೆಗೆ ಹಸುಗಳನ್ನು ಕಳುಹಿಸಿದ್ದೆವು’ ಎಂದು ಹೇಳಿದರು.
‘ಹಸುಗಳ ಮಾಲೀಕ ಬಾಬುಸಾಬ್ ಮುಲ್ತಾನಿ ಜೂನ್ 28ರಂದು ಗೋಶಾಲೆಗೆ ತೆರಳಿ, ಹಸುಗಳನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಆಗ ಶ್ರೀರಾಮ ಸೇನೆಯವರು ಮತ್ತೆ ಹಿಂಬಾಲಿಸಿ, ಬಾಬುಸಾಬ್ ಮನೆ ಕಡೆ ತೆರಳಿದರು. ಮಹಿಳೆಯರಷ್ಟೇ ಇದ್ದಾಗ ಮನೆಗೆ ನುಗ್ಗಿ ಗಲಾಟೆ ಮಾಡಿದರು. ಆಗ ಮಹಿಳೆಯರು ಚೀರಿದಾಗ, ಗ್ರಾಮಸ್ಥರು ಓಡಿಬಂದು ಊರ ಮಧ್ಯದ ಮರಕ್ಕೆ ಕಾರ್ಯಕರ್ತರನ್ನು ಕಟ್ಟಿ ಥಳಿಸಿದ್ದಾರೆ. ಭಾನುವಾರ ಈ ವಿಷಯ ನಮಗೆ ತಿಳಿದಿದೆ’ ಎಂದರು.
‘ಯಮಕನಮರಡಿ ಠಾಣೆಗೆ ಎರಡು ಗುಂಪಿನವರನ್ನು ಕರೆಯಿಸಿದಾಗಲೂ, ಯಾರೂ ದೂರು ಕೊಟ್ಟಿಲ್ಲ. ಥಳಿತದ ವಿಡಿಯೊ ಹೊರಬಂದಾಗ, ಕಾರ್ಯಕರ್ತರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ, ಯಾರೂ ಸಂಪರ್ಕಕ್ಕೆ ಸಿಗದಿದ್ದಾಗ ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ. ಕಾರ್ಯಕರ್ತರನ್ನು ಥಳಿಸುವ ವಿಡಿಯೊದಲ್ಲಿ ಹಿಂದೂಗಳು, ಮುಸ್ಲಿಮರು ಇದ್ದಾರೆ’ ಎಂದು ಹೇಳಿದರು.
‘ಒಂದುವೇಳೆ ಶ್ರೀರಾಮ ಸೇನೆ ಕಾರ್ಯಕರ್ತರು ಗೋ ರಕ್ಷಕರಾಗಿದ್ದರೆ, ಪೊಲೀಸರಿಗೆ ದೂರು ಕೊಡಬೇಕಿತ್ತು. ಇದರ ಬದಲಿಗೆ ತಾವೇ ಒಬ್ಬರ ಮನೆಗೆ ನುಗ್ಗಿದ್ದು ಅಕ್ಷರಶಃ ಅಪರಾಧ. ಇನ್ನೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸಿದ್ದು ಇನ್ನೂ ಅಪರಾಧ’ ಎಂದರು.
‘ನಮ್ಮ ದೂರನ್ನು ಪೊಲೀಸರು ಪಡೆಯಲಿಲ್ಲ’ ಎಂದು ಶ್ರೀರಾಮ ಸೇನೆಯವರು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಗುಳೇದ, ‘ನಾವು ದೂರು ಪಡೆದಿಲ್ಲ ಎಂಬುದಕ್ಕೆ ಅವರು ದಾಖಲೆ ತೋರಿಸಲಿ. ಎಲ್ಲ ಠಾಣೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಅವುಗಳನ್ನು ಪರಿಶೀಲಿಸಿದಾಗ ಸಹ ದೂರು ಕೊಟ್ಟಿದ್ದು ಕಂಡುಬಂದಿಲ್ಲ’ ಎಂದು ಹೇಳಿದರು.
‘ಶ್ರೀರಾಮ ಸೇನೆಯ ಐವರು ಕಾರ್ಯಕರ್ತರಲ್ಲಿ ಮಹಾವೀರ ಸೊಲ್ಲಾಪುರೆ ಎಂಬ ರೌಡಿಶೀಟರ್ ಸಹ ಇದ್ದಾನೆ. ಬೆಳಗಾವಿಯಿಂದ ಕಲಬುರಗಿ ಜಿಲ್ಲೆಗೆ ಆತನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಗಡಿಪಾರು ಆಗಿರುವ ರೌಡಿಶೀಟರ್‌ಗೆ ಇಂಗಳಿಯಲ್ಲೇನು ಕೆಲಸ? ಗಡಿಪಾರು ಆದೇಶ ಧಿಕ್ಕರಿಸಿ ಇಲ್ಲಿ ಬರಬೇಕಾದ ಅವಶ್ಯಕತೆ ಏನಿತ್ತು?’ ಎಂದು ಡಾ.ಭೀಮಾಶಂಕರ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.