ADVERTISEMENT

ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸತೀಶ ಜಾರಕಿಹೊಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 15:21 IST
Last Updated 29 ಅಕ್ಟೋಬರ್ 2021, 15:21 IST
ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಅಧಿಕಾರಿಗಳ ಸಭೆ ನಡೆಸಿದರು
ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶಾಸಕರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಅಧಿಕಾರಿಗಳ ಸಭೆ ನಡೆಸಿದರು   

ಬೆಳಗಾವಿ: ‘ನಗರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಮತ್ತು ಬೀದಿದೀಪಗಳ ನಿರ್ವಹಣೆ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪದೇ ಪದೇ ಬೀದಿ ದೀಪಗಳನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿದೆ. ಇದನ್ನು ತಡೆಯಲು ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಬೇಕು. ಈಗ ಹಬ್ಬದ ಸಮಯವಾಗಿರುವುದರಿಂದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಅನಧಿಕೃತ ಮನೆಗಳ ಪಟ್ಟಿ ಮಾಡಿ:‘ಮನೆ ನಿರ್ಮಿಸಿಕೊಳ್ಳಲು ಸಾರ್ವಜನಿಕರಿಗೆ ಪಾಲಿಕೆಯಿಂದ ಎನ್‌ಒಸಿ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಹೀಗಾಗಿ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿರುವ ಅನಧಿಕೃತ ಮನೆಗಳ ಪಟ್ಟಿ ಮಾಡಬೇಕು. ಕಾನೂನುಬದ್ಧವಾಗಿ ತೆರವುಗೊಳಿಸಲು ಸಾಧ್ಯತೆ ಇರುವ ಮನೆಗಳನ್ನು ತೆರವುಗೊಳಿಸಬೇಕು. ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ನಗರದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಮಹಾನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ ಇದ್ದರು.

ಶಾಸಕರಿಗೆ ಸಮಾಧಾನವಾಗಿದೆಯೇ?
‘ನಗರದ ಶಾಸಕರು (ಅಭಯ ಪಾಟೀಲ ಹಾಗೂ ಅನಿಲ ಬೆನಕೆ) ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರ ನಡುವಿನ ತಿಕ್ಕಾಟ ಅವರ ವೈಯಕ್ತಿಕ ಸಮಸ್ಯೆಯಾಗಿದೆ. ಘೂಳಪ್ಪ ಹೊಸಮನಿ ಅವರನ್ನು ಅಧಿಕಾರದಿಂದ ಇಳಿಸಿದ ಮೇಲಾದರೂ ಶಾಸಕರು ಸಮಾಧಾನದಿಂದ ಇದ್ದಾರೆಯೋ ಇಲ್ಲವೋ’ ಎಂದು ಅವರೇ ಹೇಳಬೇಕು’ ಎಂದು ಸತೀಶ ವ್ಯಂಗ್ಯವಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಹೊಸ ಅಧ್ಯಕ್ಷರನ್ನು ಅಧಿಕಾರದಿಂದ ಇಳಿಸುತ್ತಾರೆಯೋ, ಮುಂದುವರೆಸುತ್ತಾರೆಯೋ ನೋಡಬೇಕು. ನಗರದ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರುತ್ತದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.