ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ವೃದ್ಧಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 12:18 IST
Last Updated 20 ಮಾರ್ಚ್ 2021, 12:18 IST
ಬೆಳಗಾವಿಯಲ್ಲಿ ಶನಿವಾರ ನಡೆದ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ (ಪ್ರೌಢಶಿಕ್ಷಣ) ಕೆ.ಎಸ್. ಕರಿಚನ್ನವರ ಮಾತನಾಡಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ (ಪ್ರೌಢಶಿಕ್ಷಣ) ಕೆ.ಎಸ್. ಕರಿಚನ್ನವರ ಮಾತನಾಡಿದರು   

ಬೆಳಗಾವಿ: ‘ಶಿಕ್ಷಕರು ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ (ಪ್ರೌಢಶಿಕ್ಷಣ) ಕೆ.ಎಸ್. ಕರಿಚನ್ನವರ ಸೂಚಿಸಿದರು.

ಡಿಡಿಪಿಐ ಹಾಗೂ ಬಿಇಒ ಕಚೇರಿ, ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನಗರ ವಲಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕು. ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳತ್ತ ವಿಶೇಷ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿದ ಪ್ರೌಢಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಫಲಿತಾಂಶ ಸುಧಾರಣೆಗೆ ಶ್ರಮಿಸುವಂತೆ ಸೂಚಿಸಿದರು.

ಡಿಡಿಪಿಐ ಡಾ.ಎ.ಬಿ. ಪುಂಡಲೀಕ, ಡಯಟ್ ಪ್ರಾಚಾರ್ಯ ಎಂ.ಎಂ. ಸಿಂಧೂರ, ಡಿವೈಪಿಸಿ ಬಸವರಾಜ ಮಿಲ್ಲಾನಟ್ಟಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ಎನ್.ಆರ್. ಪಾಟೀಲ, ಕ್ಷೇತ್ರ ಸಮನ್ವಯ ಅಧಿಕಾರಿ ಡಾ.ರಾಜಶೇಖರ ಚಳಿಗೇರಿ, ಸರ್ಕಾರಿ ಬಿ.ಇಡಿ ಕಾಲೇಜಿನ ಉಪನ್ಯಾಸಕ ಎನ್.ಕೆ. ಕಾಳೆ, ಮುಖ್ಯಶಿಕ್ಷಕ ಎಂ.ಕೆ. ಮಾದಾರ ಇದ್ದರು.

ಬಿಇಒ ವೈ.ಜೆ. ಭಜಂತ್ರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.