ADVERTISEMENT

ಸಹಕಾರ ಸೊಸೈಟಿಗಳ ವಿರುದ್ಧ ತನಿಖೆ ತೀವ್ರಗೊಳಿಸಿದ ಇಡಿ, ಆಸ್ತಿಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 15:35 IST
Last Updated 14 ಆಗಸ್ಟ್ 2020, 15:35 IST
   

ಬೆಳಗಾವಿ: ಠೇವಣಿದಾರರ ಕೋಟ್ಯಂತರ ರೂಪಾಯಿ ಮರುಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಚಲನಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅಧ್ಯಕ್ಷರಾಗಿರುವ ಸಂಗೊಳ್ಳಿರಾಯಣ್ಣ ಹಾಗೂ ಭೀಮಾಂಬಿಕಾ ಸಹಕಾರಿ ಸೊಸೈಟಿಯ ವಿರುದ್ಧದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ತೀವ್ರಗೊಳಿದ್ದಾರೆ.

ಕೆಲವು ದಿನಗಳಿಂದ ಇಲ್ಲಿ ಮೊಕ್ಕಂ ಹೂಡಿರುವ ಮೂವರು ಅಧಿಕಾರಿಗಳ ತಂಡ, ಈ ಸೊಸೈಟಿಗಳಿಗೆ ಸಂಬಂಧಿಸಿದ ಆಸ್ತಿಗಳ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕುತ್ತಿದೆ. ಸಹಾಯಕ್ಕೆಂದು ಇಲ್ಲಿನ ಕಂದಾಯ ಇಲಾಖೆಯ ಇಬ್ಬರು ಹಾಗೂ ಪೊಲೀಸ್ ಇಲಾಖೆಯ ಒಬ್ಬರನ್ನು ನಿಯೋಜಿಸಲಾಗಿದೆ.

‘ಪ್ರಕರಣದಲ್ಲಿ, ಈವರೆಗೆ 110 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇವುಗಳಲ್ಲಿ ಬಹುತೇಕ ಆಸ್ತಿಗಳು ಜಿಲ್ಲೆಯೊಂದರಲ್ಲೇ ಇವೆ’ ಎಂದು ತಿಳಿದುಬಂದಿದೆ.

ADVERTISEMENT

‘ಸೊಸೈಟಿಗಳಿಗೆ ಸಂಬಂಧಿಸಿದ ನಿವೇಶನ, ಖಾಲಿ ಜಾಗ, ಜಮೀನು, ಕಟ್ಟಡ ಮೊದಲಾದ ಆಸ್ತಿಗಳನ್ನು ಇ.ಡಿ. ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆ.17ರವರೆಗೂ ಇಲ್ಲಿಯೇ ಇದ್ದು ಪ್ರಕ್ರಿಯೆ ನಡೆಸಲಿದ್ದಾರೆ. ಠೇವಣಿದಾರರಿಗೆ ಹಣ ಮರಳಿಸಲು ಎಲ್ಲ ಪ್ರಯತ್ನವನ್ನೂ ಈ ಮೂಲಕ ಮಾಡಲಾಗುತ್ತಿದೆ’ ಎಂದು ಉಪ ವಿಭಾಗಾಧಿಕಾರಿ ಅಶೋಕ ತೇಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.