ನಿಪ್ಪಾಣಿ: ‘ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯು ಅನೇಕ ಸಮಾಜಮುಖಿ ಕಾರ್ಯ ಜಾರಿಗೊಳಿಸಿದೆ. ಕುಟುಂಬದ ಸ್ವಾವಲಂಬನೆಗಾಗಿ ಕಾರ್ಖಾನೆ ರೂಪಿಸಿರುವ ಅಪಘಾತ ವಿಮೆ ಯೋಜನೆ ದೂರದೃಷ್ಟಿಯುಳ್ಳದ್ದಾಗಿದೆ’ ಎಂದು ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಕನೇರಿಯ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬುದಿಹಾಳ ಗ್ರಾಮದಲ್ಲಿ ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ವತಿಯಿಂದ ಬುಧವಾರ ಅಪಘಾತ ವಿಮಾ ಪರಿಹಾರದ ಚೆಕ್‌ನ್ನು ಸದಸ್ಯರ ವಾರಸುದಾರರಿಗೆ ವಿತರಿಸಿ, ಮಾತನಾಡಿದರು.
ಬೂದಿಹಾಳ ಗ್ರಾಮದ ಕಾರ್ಖಾನೆಯ ಸದಸ್ಯರಾದ ಸಂಜಯ ಮುರಳಿಧರ ಜಾಧವ ಫೆ.19 ರಂದು ದ್ವಿಚಕ್ರ ವಾಹನ ಅಪಘಾತದಲ್ಲಿ ನಿಧನರಾಗಿದ್ದರು. ಅವರ ಕುಟುಂಬಕ್ಕೆ ಕಾರ್ಖಾನೆಯ ವತಿಯಿಂದ ಅಪಘಾತ ವಿಮೆ ₹5 ಲಕ್ಷದ ಚೆಕ್ ವಿತರಿಸಲಾಯಿತು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಪರಿಹಾರ ಮೊತ್ತವನ್ನು ಸರಿಯಾಗಿ ಬಳಸಿಕೊಂಡು ಸ್ವಾವಲಂಬಿಯಾಗಬೇಕು ಎಂದರು.
ಸ್ಥಳೀಯ ವಿರುಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಸದಲಗಾದ ಗೀತಾಶ್ರಮ ಮಠದ ಶ್ರದ್ಧಾನಂದ ಸ್ವಾಮೀಜಿ, ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ, ನಿರ್ದೇಶಕ ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಸಮಿತ ಸಾಸನೆ, ಜಯವಂತ ಭಾಟಲೆ, ಕಿರಣ ನಿಕಾಡೆ, ಕಾರ್ಖಾನೆಯ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.