ADVERTISEMENT

ಭಕ್ತಿ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ

ವಿಜೃಂಭಣೆಯಿಂದ ಜರುಗಿದ ಪಟ್ಟಣಕಡೋಲಿಯ ವಿಠ್ಠಲ ಬೀರದೇವ ಜಾತ್ರೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 16:26 IST
Last Updated 17 ಅಕ್ಟೋಬರ್ 2022, 16:26 IST
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪಟ್ಟಣಕಡೋಲಿಯ ವಿಠ್ಠಲ ಬೀರದೇವ ಜಾತ್ರೆಯಲ್ಲಿ ಅಂಜನಗಾಂವದ ಖೇಲೊಬಾ ನಾನಾದೇವ ವಾಘಮೋಡೆ ಫರಾಂಡೆ ಬಾಬಾ ದೇವರ ನುಡಿಗಳನ್ನಾಡಿದರು
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪಟ್ಟಣಕಡೋಲಿಯ ವಿಠ್ಠಲ ಬೀರದೇವ ಜಾತ್ರೆಯಲ್ಲಿ ಅಂಜನಗಾಂವದ ಖೇಲೊಬಾ ನಾನಾದೇವ ವಾಘಮೋಡೆ ಫರಾಂಡೆ ಬಾಬಾ ದೇವರ ನುಡಿಗಳನ್ನಾಡಿದರು   

ಚಿಕ್ಕೋಡಿ: ಬಾನೆತ್ತರಕ್ಕೆ ಚಿಮ್ಮುತ್ತಿದ್ದ ಭಂಡಾರದೋಕುಳಿ, ಡೊಳ್ಳು ವಾದನದ ಮಾರ್ದನಿಯ ಮಧ್ಯೆ 'ಬೀರೋಬಾಂಚಾ ನಾವಾನ್ ಚಾಂಗಭಲೋ' ಜೈಕಾರಗಳ ಝೇಂಕಾರ, ಭಕ್ತಿ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ, ನೆಲದ ಮೇಲಡಿ ಭಂಡಾರದ ಹಾಸುಗೆ, ಎಲ್ಲೆಲ್ಲೂ ಭಕ್ತಿಮಯ ವಾತಾವರಣ...!

ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸುಕ್ಷೇತ್ರ ಪಟ್ಟಣ ಕಡೋಲಿಯ ವಿಠ್ಠಲ ಬೀರದೇವರ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದ ಚಿತ್ರಣಗಳಿವು.

ಕೋಜಾಗಿರಿ ಪೌರ್ಣಿಮೆಯ ಮೃಗ ನಕ್ಷತ್ರದಲ್ಲಿ ಜರುಗಿದ ಈ ಜಾತ್ರೆಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳ ಲಕ್ಷಾಂತರ ಭಕ್ತರು ಸೇರಿದ್ದರು. ಅಂಜನಗಾಂವದ ಖೇಲೊಬಾ ನಾನಾದೇವ ವಾಘಮೋಡೆ ಫರಾಂಡೆ ಬಾಬಾ ಅವರಿಂದ ದೇವರ ನುಡಿಗಳನ್ನಾಡಿದರು. ಅವರು ರಾಜಕೀಯ ಸ್ಥಿತಿಗತಿ, ಮಳೆ, ರೋಗರುಜಿನುಗಳ ಕುರಿತು ಭವಿಷ್ಯ ನುಡಿದರು.

ADVERTISEMENT

ದೇವರ ನುಡಿಯ ಮುಖ್ಯ ದಿನ ಗ್ರಾಮದ ಪ್ರಕಾಶ ಕಾಕಾ ಪಾಟೀಲ ಹಾಗೂ ಗ್ರಾಮಸ್ಥರು ಮಾನದ ಕತ್ತಿಗೆ ಪೂಜೆ ಸಲ್ಲಿಸಿದರು. ನಂತರ ಫರಾಂಡೆ ಬಾಬಾ ಅವರ ಭೇಟಿಯಾಗಿ ವಿಠ್ಠಲ ಬೀರದೇವರ ದರ್ಶನಕ್ಕಾಗಿ ಆಗಮಿಸುವಂತೆ ಆಹ್ವಾನ ನೀಡಿದರು. ಮಾನಕರಿಗಳ ಮನವಿಯಂತೆ ಫರಾಂಡೆ ಬಾಬಾ ಅವರು ಮಂದಿರದ ಗರ್ಭಗುಡಿಯ ಎದುರಿಗಿನ ಮಾನದ ಗಾದಿಯಿಂದ ದೇವರ ದರ್ಶನಕ್ಕೆ ಮಂದಿರದೊಳಗೆ ತೆರಳಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಭಂಡಾರದೋಕುಳಿ ಆಡಿದರು.

ದೇವರ ನುಡಿಗಳನ್ನು ಆಲಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಜಾತ್ರೆಯಲ್ಲಿ ಕಂಬಳಿಗಳ ಮಾರಾಟ ಭರ್ಜರಿಯಾಗಿತ್ತು.

ದೇವರ ನುಡಿಯ ಸಾರಾಂಶ:ಅಕಾಲಿಕ ಮಳೆ ಪ್ರಮಾಣ ಹೆಚ್ಚಳ, ದುಬಾರಿ ಬೆಲೆಯೇರಿಕೆ ಬಿಸಿ ಹೆಚ್ಚಲಿದೆ. ರಾಜಕೀಯದಲ್ಲಿ ಗೊಂದಲಗಳುಂಟಾಗಿ ಏರುಪೇರಾಗುವ ಸಾಧ್ಯತೆ. ದೇಶದಲ್ಲಿ ನದಿ ಜೋಡಣೆ ಪ್ರಕ್ರಿಯೆಗೆ ಚುರುಕು, ಪೂರ್ವೋತ್ತರ ರಾಜ್ಯಗಳಲ್ಲಿ ಸಮಾನ ನಾಗರಿಕ ಕಾಯ್ದೆ, ಭಾರತ ಜಾಗತಿಕ ನೇತೃತ್ವದ ದಾರಿಯಲ್ಲಿ ಸಾಗಲಿದೆ. ಸಹೋದರ-ಸಹೋದರಿಯರಲ್ಲಿ ಆಸ್ತಿ ಅಂತಸ್ತುಗಳ ಕುರಿತು ವಾಗ್ವಾದ ಸೇರಿದಂತೆ ಹಲವು ಭವಿಷ್ಯಗಳನ್ನು ಫರಾಂಡೆ ಬಾಬಾ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.