ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೌನವಾಗಿದ್ದಾರೆ? ಇವರೆಲ್ಲರೂ ಪಾಕಿಸ್ತಾನದವರಾ?’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಶ್ನಿಸಿದರು.
ಪಟ್ಟಣದಲ್ಲಿ ಮಂಗಳವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು,‘ಸಿದ್ಧರಾಮಯ್ಯ ಅವರ ಸರ್ಕಾರ ರಾಜ್ಯದ ಜನರಿಗೆ ‘ಗ್ಯಾರಂಟಿ’ಗಳ ಜತೆಗೆ ಉಚಿತವಾಗಿ ಭಯೋತ್ಪಾದನೆಯೂ ನೀಡುತ್ತಿದೆ. ಇಂಥವರನ್ನು ಭಾರತ ಮಾತೆ ಎಂದಿಗೂ ಕ್ಷಮಿಸುವುದಿಲ್ಲ’ ಎಂದರು.
‘ಇಲ್ಲಿನ ಬೆಳವಣಿಗೆಗಳನ್ನು ನೋಡಿದರೆ ಕಾಂಗ್ರೆಸ್ ಮಾಡುತ್ತಿರುವುದು ಭಾರತ ಜೋಡೋ ಯಾತ್ರೆಯೇ? ಥೋಡೋ ಯಾತ್ರೆಯೇ? ನ್ಯಾಯ ಯಾತ್ರೆಯೇ? ಅನ್ಯಾಯ ಯಾತ್ರೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘2006ರಿಂದ 2014ರವರೆಗೆ ಯುಪಿಎ ಸರ್ಕಾರ ₹65 ಸಾವಿರ ಕೋಟಿ ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಆದರೆ, ಮೋದಿ ಸರ್ಕಾರ ಹತ್ತು ವರ್ಷದಲ್ಲಿ ₹2.85 ಲಕ್ಷ ಕೋಟಿ ಅನುದಾನ ನೀಡಿದೆ. ರಾಜ್ಯಕ್ಕೆ ಅನ್ಯಾಯ ಮಾಡಿದ್ದು ಯಾರು ಎಂದು ಜನ ಅರ್ಥ ಮಾಡಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.