ADVERTISEMENT

ಕೆ.ಕಲ್ಯಾಣ್ ಪತ್ನಿ, ಕುಟುಂಬಕ್ಕೆ ಮೋಸ ಆರೋಪ: ಮಂತ್ರವಾದಿ ಶಿವಾನಂದ ವಾಲಿ ಬಂಧ‌ನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 7:33 IST
Last Updated 5 ಅಕ್ಟೋಬರ್ 2020, 7:33 IST
ಚಿತ್ರ ಸಾಹಿತಿ ಕೆ. ಕಲ್ಯಾಣ್‌
ಚಿತ್ರ ಸಾಹಿತಿ ಕೆ. ಕಲ್ಯಾಣ್‌   

ಬೆಳಗಾವಿ: ಚಲನಚಿತ್ರ ಗೀತ ಸಾಹಿತಿ ಕೆ.ಕಲ್ಯಾಣ್ ಪತ್ನಿ ಹಾಗೂ ಅವರ ಕುಟುಂಬದವರಿಗೆ ಮೋಸ ಮಾಡಿದ ಆರೋಪದ ಮೇಲೆ ಬಾಗಲಕೋಟೆ ಬೀಳಗಿಯ ಶಿವಾನಂದ ವಾಲಿ ಎನ್ನುವವರನ್ನು ಇಲ್ಲಿನ ಮಾಳಮಾರುತಿ ಠಾಣೆ ಪೊಲೀಸರು ಸೊಮವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಶಿವಾನಂದ, ಕೆ.ಕಲ್ಯಾಣ್ ದೂರಿನ ಮೇರೆಗೆ ದಾಖಲಾದ ಪ್ರಕರಣದ ಎ2 ಆರೋಪಿ. ಪತ್ನಿ, ಅತ್ತೆ, ಮಾವನನ್ನು ಪುಸಲಾಯಿಸಿ ಹಣ, ಆಸ್ತಿ ವರ್ಗಾವಣೆ ಆರೋಪ ಅವರ ಮೇಲಿದೆ. ಈ ಕುರಿತು ಕೆ‌.ಕಲ್ಯಾಣ್ ಸೆ. 30ರಂದು ಮಾಳಮಾರುತಿ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು.

ಕೆ.ಕಲ್ಯಾಣ್ ನೀಡಿದ್ದ ದೂರಿನಲ್ಲಿ ₹ 19.80 )ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು ಆದರೆ, ಪೊಲೀಸರ ತನಿಖೆಯಲ್ಲಿ ₹ 45 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿಸಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ADVERTISEMENT

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ, ಕೆ. ಕಲ್ಯಾಣ್ ಪತ್ನಿ ಅಶ್ವಿನಿ ಕುಟುಂಬಕ್ಕೆ ಆಪ್ತವಾಗಿದ್ದರು. ಮನೆಕೆಲಸದಾಕೆ ಗಂಗಾ ಕುಲಕರ್ಣಿ ಜೊತೆಗೂಡಿ ಆಸ್ತಿ ಬರೆಸಿಕೊಂಡು ಮೋಸ ಮಾಡಿದ್ದಾರೆ. ಪತ್ನಿ ಅಶ್ವಿನಿಯನ್ನು ಪುಸಲಾಯಿಸಿ ಅಪಹರಣ ಮಾಡಿದ್ದಾರೆ. ಮಾಟ- ಮಂತ್ರದ ಮೂಲಕ ವಶೀಕರಣ ಮಾಡಿಕೊಂಡಿದ್ದಾರೆ' ಎಂದು ಕಲ್ಯಾಣ್ ದೂರಿದ್ದರು.

ಪೊಲೀಸರು ಶಿವಾನಂದ ವಶಕ್ಕೆ ಪಡೆದ ವೇಳೆ ಮಾಟ- ಮಂತ್ರಕ್ಕೆ ಬಳಸುವ ವಸ್ತುಗಳು ಜಪ್ತಿ ಮಾಡಿದ್ದಾರೆ.

'ಊದಿನಕಡ್ಡಿ ಶಿವಾನಂದ ಎಂದು ಕರೆಸಿಕೊಳ್ಳುವ ಶಿವಾನಂದ, ಮಾಟ ಮಂತ್ರ ಮಾಡಿ ಹಲವರಿಗೆ ವಂಚನೆ ಮಾಡಿರುವ ಶಂಕೆ ಇದೆ' ಎಂದು ಮೂಲಗಳು ತಿಳಿಸಿವೆ.

ಈ ಕಾರಣದಿಂದ ಮತ್ತೆ ಶಿವಾನಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಶಿವಾನಂದ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಇಂದು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.