ADVERTISEMENT

ಕಾಲು ಬಾಯಿ ಉಲ್ಬಣ: 200 ಹಸು, ಕರು ಸಾವು!

ಮುಗಳಿಯಲ್ಲಿ ಪಶುಚಿಕಿತ್ಸಾಲಯ ಆರಂಭಿಸಲು ಆಗ್ರಹ

ಸುಧಾಕರ ಎಸ್.ತಳವಾರ, ಬೆಂಗಳೂರು
Published 11 ಜನವರಿ 2019, 19:45 IST
Last Updated 11 ಜನವರಿ 2019, 19:45 IST
ಮುಗಳಿ ಗ್ರಾಮದಲ್ಲಿ ಕಾಲು ಬಾಯಿ ಬೇನೆಯಿಂದ ಹಸುಗಳು ಸೊರಗಿವೆ
ಮುಗಳಿ ಗ್ರಾಮದಲ್ಲಿ ಕಾಲು ಬಾಯಿ ಬೇನೆಯಿಂದ ಹಸುಗಳು ಸೊರಗಿವೆ   

ಚಿಕ್ಕೋಡಿ: ಈ ಭಾಗದಲ್ಲಿ ಹೈನುಗಾರಿಕೆಯಿಂದಲೇ ಹೆಸರುವಾಸಿಯಾಗಿರುವ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಕಾಲು–ಬಾಯಿ ಬೇನೆಯಿಂದಾಗಿ ಒಂದೂವರೆ ತಿಂಗಳಲ್ಲಿ 200 ಹಸು ಮತ್ತು ಕರುಗಳು ಅಸುನೀಗಿವೆ. ಇದರಿಂದ ಕೃಷಿಕರು ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ.ಇದು ಹೈನುಗಾರಿಕೆ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಈ ಗ್ರಾಮದಲ್ಲಿ 250ರಿಂದ 300 ಕುಟುಂಬಗಳು ವಾಸಿಸುತ್ತಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಪಡುವ ಪರಿಸ್ಥಿತಿ. ಅದನ್ನು ಮೆಟ್ಟಿನಿಂತಿರುವ ಇಲ್ಲಿನ 50ಕ್ಕೂ ಹೆಚ್ಚು ಕುಟುಂಬಗಳು 1500ಕ್ಕೂ ಅಧಿಕ ಹಸು ಮತ್ತು ಕರುಗಳನ್ನು ಸಾಕಿದ್ದಾರೆ. ನಿತ್ಯವೂ ಗ್ರಾಮದಿಂದ 7000ಕ್ಕೂ ಹೆಚ್ಚು ಲೀಟರ್‌ ಹಾಲು ಉತ್ಪಾದನೆಯಾಗಿ ವಿವಿಧೆಡೆ ಸರಬರಾಜಾಗುತ್ತಿದೆ.

ಜೀವ ಹಿಂಡಿದ ರೋಗ:

ADVERTISEMENT

‘ವೈರಸ್ ತಗುಲಿದ ಜಾನುವಾರುಗಳಲ್ಲಿ ಅತಿಯಾದ ಜ್ವರ. ಬಾಯಲ್ಲಿ ನೀರ್ಗುಳ್ಳೆ. ವಿಪರೀತ ಜೊಲ್ಲು ಸುರಿಸುವುದು. ಕುಂಟುತ್ತಾ ನಡೆಯುವುದು. ಕೆಚ್ಚಲಿನ ಮೇಲೆ ಗುಳ್ಳೆಗಳು. ತೂಕದಲ್ಲಿ ಇಳಿಕೆಯಾಗುವುದು. ಆಹಾರ ತಿನ್ನದೇ ಇರುವುದು. ಹಾಲು ಕೊಡುವ ಪ್ರಮಾಣ ಕಡಿಮೆಯಾಗುವುದು ಕಂಡುಬರುತ್ತಿದೆ. ರೋಗದಿಂದ ಹಸು ಮತ್ತು ಕರುಗಳು ಹೃದಯದ ಸ್ನಾಯುಗಳ ಉರಿಯೂತದಿಂದ ಮೃತಪಟ್ಟಿವೆ’ ಎಂದು ರೈತ ಗಣಪತಿ ಕುಂಬಾರ ಅಳಲು ತೋಡಿಕೊಂಡರು.

‘ಖಾಸಗಿ ವೈದ್ಯರಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಆದರೂ, ತಮ್ಮ 4 ಹಸುಗಳು ಮತ್ತು 10 ಕರುಗಳು ರೋಗದಿಂದ ಮೃತಪಟ್ಟಿದ್ದು, ₹ 3 ಲಕ್ಷ ನಷ್ಟ ಉಂಟಾಗಿದೆ. ಅಲ್ಲದೇ, ಚಿಕಿತ್ಸೆಗಾಗಿ ₹ 2 ಲಕ್ಷ ಖರ್ಚು ಮಾಡಿದ್ದೇನೆ. ಈಗ ರೋಗ ಹತೋಟಿಗೆ ಬಂದಿದೆ’ ಎಂದು ಗ್ರಾಮದ ಕೃಷಿಕ ಮಹಾಂತೇಶ ಹರಗಣ್ಣವರ ಹೇಳಿದರು.

ಬೇಕಿದೆ ಪಶು ಚಿಕಿತ್ಸಾಲಯ:

‘ಮುಗಳಿ ಗ್ರಾಮ ಹೈನುಗಾರಿಕೆಗೆ ಪ್ರಸಿದ್ಧಿಯಾಗಿದೆ. ಗ್ರಾಮದಲ್ಲಿ 1500ಕ್ಕೂ ಹೆಚ್ಚು ಹಸುಗಳ ಸಾಕಾಣಿಕೆ ಮಾಡಲಾಗಿದೆ. ಅವುಗಳಿಗೆ ರೋಗರುಜಿನುಗಳು ತಗುಲಿದಾಗ ಚಿಕಿತ್ಸೆಯದ್ದೇ ಸಮಸ್ಯೆಯಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಖಾಸಗಿ ವೈದ್ಯರಿಂದ ಚಿಕಿತ್ಸೆ ನೀಡುತ್ತೇವೆ. ಗ್ರಾಮದಲ್ಲಿಯೇ ಸರ್ಕಾರದಿಂದ ಪಶುಚಿಕಿತ್ಸಾಲಯ ಆರಂಭಿಸುವಂತೆ ಈ ಭಾಗದ ಚುನಾಯಿತ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ತ್ವರಿತವಾಗಿ ಸ್ಪಂದಿಸಿ, ಗ್ರಾಮದಲ್ಲಿ ಪಶುಚಿಕಿತ್ಸಾಲಯ ಆರಂಭಿಸುವ ಮೂಲಕ ಕೃಷಿಕರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಶೇಖರ ಬಂಬಲವಾಡಿ ಒತ್ತಾಯಿಸಿದರು.

ಸರ್ಕಾರಕ್ಕೆ ಪ್ರಸ್ತಾವ:

‘ಮುಗಳಿ ಗ್ರಾಮದಲ್ಲಿ ಜಾನುವಾರುಗಳಲ್ಲಿ ಕಾಲು–ಬಾಯಿ ಬೇನೆ ಕಾಣಿಸಿಕೊಂಡ ತಕ್ಷಣವೇ ಗ್ರಾಮದಲ್ಲಿ ಸಭೆ ನಡೆಸಿ, ಮುಂಜಾಗ್ರತೆ ಕ್ರಮಗಳ ಕುರಿತು ಕೃಷಿಕರಲ್ಲಿ ಅರಿವು ಮೂಡಿಸಲಾಗಿದೆ. ರೋಗ ತಗುಲಿರುವ ಜಾನುವಾರುಗಳಿಗೆ ಮತ್ತು ರೋಗ ತಗುಲದೇ ಇರುವ ಜಾನುವಾರುಗಳಿಗೆ ರೋಗ ಬಾರದಂತೆ ಲಸಿಕೆ ನೀಡಲಾಗಿದೆ. ರೋಗ ಈಗ ಹತೋಟಿಯಲ್ಲಿದೆ. ಇಲಾಖೆ ಗಮನಕ್ಕೆ ಬಂದಿರುವ ಮೃತಪಟ್ಟಿರುವ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿ ಪರಿಹಾರ ಧನ ಮಂಜೂರಾತಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸದಾಶಿವ ಉಪ್ಪಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಗಳಿ ಗ್ರಾಮದಲ್ಲಿ ಪಶುಚಿಕಿತ್ಸಾಲಯ ಆರಂಭಿಸುವಂತೆ ರೈತರು ರಾಯಬಾಗ ಶಾಸಕರಿಗೂ ಮನವಿ ಸಲ್ಲಿಸಿದ್ದಾರೆ. ಇಲಾಖೆಯಿಂದಲೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.