ಚಿಕ್ಕೋಡಿ: ತಾಲ್ಲೂಕಿನ ಕಬ್ಬೂರ, ಜೋಡಟ್ಟಿ, ಮೀರಾಪುರಹಟ್ಟಿ, ಕೆಂಚನಟ್ಟಿ ಗ್ರಾಮಗಳನ್ನು ಒಳಗೊಂಡು ಕಬ್ಬೂರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ 10 ವರ್ಷಗಳು ಕಳೆದಿವೆ. ಕಬ್ಬೂರ ಹೊರತಾಗಿ ಇನ್ನುಳಿದ ಗ್ರಾಮಗಳು ತಮ್ಮದು ಗ್ರಾಮ ಪಂಚಾಯಿತಿಯಾಗಿಯೇ ಇರಲಿ ಎಂದು ನ್ಯಾಯಾಲಯದ ಮೆಟ್ಟಿಲೇರಿವೆ. ಅನುದಾನದ ಕೊರತೆಯಿಂದ ಗ್ರಾಮಗಳು ಅಭಿವೃದ್ಧಿ ಆಗುತ್ತಿಲ್ಲವಾದ್ದರಿಂದ ಸ್ಥಳೀಯರು ದಶಕದಿಂದ ತೊಂದರೆ ಅನುಭವಿಸುತ್ತಿದ್ದಾರೆ.
2011ರ ಜನಗಣತಿಯಂತೆ ಕಬ್ಬೂರು 10 ಸಾವಿರ, ಕೆಂಚನಹಟ್ಟಿ 3 ಸಾವಿರ, ಜೋಡಟ್ಟಿ 2 ಸಾವಿರ ಹಾಗೂ ಮೀರಾಪುರಹಟ್ಟಿ 3,500 ಜನಸಂಖ್ಯೆ ಹೊಂದಿವೆ. ಜನಸಂಖ್ಯೆ ಆಧರಿಸಿ 2015ರಲ್ಲಿ ರಾಜ್ಯ ಸರ್ಕಾರ ಕಬ್ಬೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿತು.
ಕಬ್ಬೂರ ಕೇಂದ್ರ ಸ್ಥಾನದಿಂದ ಮೀರಾಪುರಹಟ್ಟಿ, ಕೆಂಚನಹಟ್ಟಿ ಹಾಗೂ ಜೋಡಟ್ಟಿ 4 ಕಿ.ಮೀ ಅಂತರದಲ್ಲಿವೆ. ಸಮರ್ಪಕ ರಸ್ತೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಕಚೇರಿಗೆ ವಿವಿಧ ಕೆಲಸಗಳಿಗೆ ಅಲೆದಾಡುವುದು ಗ್ರಾಮಸ್ಥರಿಗೆ ತೊಂದರೆಯಾಗಿದೆ. ಹೀಗಾಗಿ ತಮ್ಮ ಗ್ರಾಮಗಳನ್ನು ಸ್ವತಂತ್ರ ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ ಈ ಮೊದಲಿನಂತೆ ಗ್ರಾಮ ಪಂಚಾಯಿತಿಯಾಗಿಯೇ ಮುಂದುವರಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.
ಪ್ರತಿ ವರ್ಷ 15ನೇ ಹಣಕಾಸು ಯೋಜನೆ ಅಡಿಯಲ್ಲಿ ₹ 1.5 ಕೋಟಿ ಅನುದಾನ ಬಿಡುಗಡೆ ಮಾಡುವ ಅವಕಾಶವಿತ್ತು. ಆದರೆ ಕಳೆದ 10 ವರ್ಷಗಳಿಂದ ಚಿಕ್ಕೋಡಿ ತಹಶೀಲ್ದಾರ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮಸ್ಥರು ವಂಚನೆಯಾಗಿದ್ದರಿಂದ ಮಹಾರಾಷ್ಟ್ರದ ಮಿರಜ್– ಸಾಂಗ್ಲಿ ಕಡೆಗೆ ಕೂಲಿ ಅರಸಿಕೊಂಡು ಹೋಗಬೇಕಿದೆಕುಮಾರ ಐಹೊಳೆ ಗ್ರಾಮಸ್ಥ ಮೀರಾಪುರಹಟ್ಟಿ
ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಹಳ್ಳಿಗರಿಗೂ ಮುಟ್ಟಿಸಲು ಪ್ರಯತ್ನ ಮಾಡಲಾಗುತ್ತಿದೆ. ಗ್ರಾಮಗಳ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗುತ್ತಿದೆಹಾಲಸಿದ್ಧ ಸುಳನ್ನವರ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕಬ್ಬೂರ
ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾದ ಬಳಿಕ ಸರ್ಕಾರದ ಆದೇಶದಂತೆ ಕಬ್ಬೂರು ಹಾಗೂ ವ್ಯಾಪ್ತಿಯ ಗ್ರಾಮಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದುರಾಜೇಶ ಬುರ್ಲಿ ತಹಶೀಲ್ದಾರ್ ಚಿಕ್ಕೋಡಿ
ದಶಕದಿಂದ ಅನುದಾನವೇ ಇಲ್ಲ
ಪಟ್ಟಣ ಪಂಚಾಯಿತಿಗೆ ಸೇರಲೊಪ್ಪದ ಗ್ರಾಮಸ್ಥರು ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಹೀಗಾಗಿ ಸರ್ಕಾರ ಕಳೆದ 10 ವರ್ಷಗಳಿಂದ 15ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅನುದಾನ ನೀಡಿಲ್ಲ. ಶಾಸಕರ ಅನುದಾನ ಮುಖ್ಯಮಂತ್ರಿ ಅನುದಾನ ಎಸ್‌ಎಫ್‌ಸಿ ಅನುದಾನ ಹೊರತುಪಡಿಸಿ ಬೇರೆ ಅನುದಾನ ಕಬ್ಬೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಿಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.