ADVERTISEMENT

ಬೆಳಗಾವಿ: ಮಹಾರಾಷ್ಟ್ರ ನಾಯಕರ ಪ್ರವೇಶ ನಿರ್ಬಂಧಿಸಲು ಕನ್ನಡ ಸಂಘಟನೆ ಮುಖಂಡರ ಆಗ್ರಹ

ಕನ್ನಡ ಸಂಘಟನೆಗಳ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 13:56 IST
Last Updated 13 ಜನವರಿ 2020, 13:56 IST
ಬೆಳಗಾವಿಗೆ ಮಹಾರಾಷ್ಟ್ರ ನಾಯಕರ ಪ್ರವೇಶ ನಿರ್ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು
ಬೆಳಗಾವಿಗೆ ಮಹಾರಾಷ್ಟ್ರ ನಾಯಕರ ಪ್ರವೇಶ ನಿರ್ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು   

ಬೆಳಗಾವಿ: ‘ಮರಾಠಿ ಸಾಹಿತ್ಯ ಸಮ್ಮೇಳನಗಳ ನೆಪದಲ್ಲಿ ಗಡಿ ವಿವಾದ ಕೆದಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಹಾರಾಷ್ಟ್ರದ ನಾಯಕರು ಕರ್ನಾಟಕಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ‘ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದ ಗಡಿ ಭಾಗದಲ್ಲಿನ ಭಾಷಾ ಸೌಹಾರ್ದಕ್ಕೆ ಧಕ್ಕೆಯಾಗುವ ಚಟುವಟಿಕೆಗಳು ನಡೆದಿವೆ. ಅಲ್ಲಿಂದ ಬರುವ ನಾಯಕರು ಹಾಗೂ ಸಾಹಿತಿಗಳು ಬೆಳಗಾವಿಯ ನೆಲದಲ್ಲಿಯೇ ನಿಂತು ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧ ಬೆಂಕಿಯಂಥ ಬಾಷೆ ಬಳಸುತ್ತಿದ್ದಾರೆ. ಇಂತಹ ನಾಯಕರು ಮತ್ತು ಸಾಹಿತಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು’ ಎಂದು ಆಗ್ರಹಿಸಿದರು.

‘ಬೆಳಗಾವಿ ಕನ್ನಡಿಗರಿಗೆ ಹಾಗೂ ಜಿಲ್ಲಾಡಳಿತಕ್ಕೆ ಸರ್ಕಾರವು ಬೆನ್ನಲುಬಾಗಿ ನಿಲ್ಲಬೇಕು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಲೇ ಇಲ್ಲಿಗೆ ಬರಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮಹಾರಾಷ್ಟ್ರ ಸರ್ಕಾರ ಹಾಗೂ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು. ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮನವಿ ಸಲ್ಲಿಸಿದರು. ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್‌ ಹಾಗೂ ಡಿಸಿಪಿ ಶ್ರೀಮತಿ ಸೀಮಾ ಲಾಟ್ಕರ್ ಅವರೊಂದಿಗೆ ಚರ್ಚಿಸಿದರು.

‘ಮರಾಠಿ ಸಾಹಿತ್ಯ ಸಮ್ಮೇಳನಗಳಿಗೆ ಅಹ್ವಾನಿಸಲಾಗುತ್ತಿರುವ ಮಹಾರಾಷ್ಟ್ರದ ನಾಯಕರು ಸಾಹಿತಿಗಳೇ ಅಲ್ಲ. ಸಮ್ಮೇಳನಕ್ಕೆಂದು ಬಂದಿದ್ದ ಸಾಹಿತಿ ಶ್ರೀಪಾಲ ಸಬ್ನಿಸ್ ಅವರು ಈಚೆಗೆ ಕರ್ನಾಟಕ ಸರ್ಕಾರದ ಬಗ್ಗೆ ಬಳಸಿದ ಭಾಷೆ ಪ್ರಚೋದನಕಾರಿಯಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ನಿಪ್ಪಾಣಿಯಲ್ಲಿ ನಡೆಯಲಿರುವ 2 ದಿನಗಳ ಸಾಹಿತ್ಯ ಸಮ್ಮೇಳನ ಹಾಗೂ ಜ. 17ರಂದು ಎಂಇಎಸ್‌ ಆಚರಿಸುವ ಹುತಾತ್ಮ ದಿನದಂದು ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬಂದು ಗಡಿ ವಿವಾದವನ್ನು ಕೆದಕುವ ಹಾಗೂ ಕನ್ನಡಿಗರನ್ನು ಪ್ರಚೋದಿಸುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಮಿತಿಯವರ ಆತಂಕ ಮತ್ತು ಕಳವಳಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಐಜಿಪಿ, ಗಡಿ ಭಾಗದ ಚಟುವಟಿಕೆಯ ಸಂಬಂಧ ಪೊಲೀಸರು ತೆಗೆದುಕೊಂಡ ಕ್ರಮಗಳು ಹಾಗೂ ಮುಂದಿನ ಕ್ರಮಗಳ ಬಗ್ಗೆ ವಿವರಿಸಿದರು. ಗೃಹ ಸಚಿವರು ಬೆಳಗಾವಿಗೆ ಬರಬೇಕು ಎನ್ನುವ ಬೇಡಿಕೆಯನ್ನು ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಎಂ.ಜಿ. ಮಕಾನದಾರ, ಬಿ. ತಿಪ್ಪೇಸ್ವಾಮಿ, ಶಿವಪ್ಪ ಶಮರಂತ, ಸಾಗರ ಬೋರಗಲ್ಲ, ಕಸ್ತೂರಿ ಭಾವಿ, ಆನಂದ ಹುಳಬತ್ತೆ, ಮಂಜುನಾಥ ಪಾಟೀಲ, ಓಂಕಾರ ಮೊಳೆ, ಪ್ರೇಮಾ, ವೀರೇಂದ್ರ ಗೋಬರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.