ADVERTISEMENT

ರಾಜ್ಯೋತ್ಸವಕ್ಕೆ ಸೇರಿದ ಲಕ್ಷ ಲಕ್ಷ ಕನ್ನಡಿಗರು: ಗಡಿಯಲ್ಲಿ ಮೊಳಗಿದ ಕನ್ನಡ ಝೇಂಕಾರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 11:42 IST
Last Updated 1 ನವೆಂಬರ್ 2025, 11:42 IST
   

ಬೆಳಗಾವಿ: ಎಲ್ಲಿ ನೋಡಿದರೂ‌ ಜನವೋ ಜನ, ಎತ್ತ ನೋಡಿದರೂ ಸಂಭ್ರಮ, ಸಾಗರೋಪಾದಿಯಲ್ಲಿ ಸೇರಿದ ಕನ್ನಡಾಭಿಮಾನಿಗಳು, ನೆಲ ನಡುಗಿಸುವಂಥ ಸಂಗೀತ, ಹಾಡು, ಯುವಕ- ಯುವತಿಯರ ನೃತ್ಯೋತ್ಸಾಹ, ಉಕ್ಕೇರಿ ಬಂದ ಅಭಿಮಾನದ ಹೊಳೆ...

ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶನಿವಾರ ಕಂಡುಬಂದ ರಾಜ್ಯೋತ್ಸವ ಸಡಗರದ ದೃಶ್ಯಗಳಿವು.

ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದ ಕನ್ನಡಿಗರು ಇನ್ನಿಲ್ಲದಂತೆ ಸಂಭ್ರಮಿಸಿದರು. ಗಡಿಯಲ್ಲಿ ನಾಡದೇವಿ ಭುವನೇಶ್ವರಿಯ ವೈಭವ ಮರುಕಳಿಸುವಂತೆ‌ ಮಾಡಿದರು.

ADVERTISEMENT

ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ತಂಡೋಪ‌ ತಂಡವಾಗಿ ಆಗಮಿಸಿದ ಯುವಕ, ಯುವತಿಯರು, ಮಹಿಳೆಯರು, ಮಕ್ಕಳು, ಹಿರಿಯರು ಐತಿಹಾಸಿಕ ಉತ್ಸವಕ್ಕೆ ಸಾಕ್ಷಿಯಾದರು.

ಶುಕ್ರವಾರ ತಡರಾತ್ರಿಯೇ ಆರಂಭವಾದ ರಾಜ್ಯೋತ್ಸವ ಸಂಭ್ರಮ ಶನಿವಾರ ಇಡೀ ದಿನ ಮುಂದುವರಿಯಿತು. ರಾಣಿ ಚನ್ನಮ್ಮ ವೃತ್ತದಲ್ಲಿ ಜೈಕಾರಗಳು ಮುಗಿಲು ಮುಟ್ಟಿದವು. ಕಣ್ಣು ಕಂಡಷ್ಟೂ ದೂರ ಕನ್ನಡ ಬಾವುಟಗಳ ಹಾರಾಟವೇ ಗೋಚರಿಸಿತು. ಎಲ್ಲೆಲ್ಲೂ ಕನ್ನಡ ಝೇಂಕಾರ ಮೊಳಗಿತು.

ಕೆಂಪು- ಹಳದಿ ಬಣ್ಣದ ದಿರಿಸು ಧರಿಸಿ‌ ಬಂದ ಹಲವರು ಕನ್ನಡ ಧ್ವಜವನ್ನು ಪ್ರತಿನಿಧಿಸುವಂತೆ ಕಂಡರು.

ಯುವಕರು ಕನ್ನಡಮಯ ಶಾಲು ಹಾಕಿಕೊಂಡು ಸಂಭ್ರಮಿಸಿದರೆ; ಯುವತಿಯರು ತಾವೇನೂ ಕಮ್ಮಿ ಇಲ್ಲ ಎಂಬಂತೆ ಕೆಣ್ಣೆಗಳ ಮೇಲೆ ಕನ್ನಡ ಧ್ಚಜದ ಬಣ್ಣ ಬಳಿದುಕೊಂಡು ಖುಷಿಪಟ್ಟರು.

ಅಪಾರ ಸಂಖ್ಯೆಯಲ್ಲಿ ಸೇರಿದ ಜನರಿಂದ ರಸ್ತೆಗಳು, ವೃತ್ತಗಳು ಕಿಕ್ಕಿರಿದು ತುಂಬಿದವು. ಪರಿಣಾಮ ವೃತ್ತದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್ ಆಯಿತು.

ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಛತ್ರಪತಿ ಸಂಭಾಜಿ ವೃತ್ತ ಹಾಗೂ ಈ ಮೂರೂ ವೃತ್ತಿಗಳನ್ನು ಸಂಪರ್ಕಿಸುವ ಕಾಲೇಜು ರಸ್ತೆ, ಕಾಕತಿವೇಸ್, ಬೋಗಾರ್ ವೇಸ್, ಅಂಬೇಡ್ಕರ್ ಮಾರ್ಗ, ಡಾ.ರಾಜ್ ಕುಮಾರ್ ಮಾರ್ಗಗಳಲ್ಲಿ ಜನ ಕಿಕ್ಕಿರಿದು ತುಂಬಿದರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಲು ಸಾಧ್ಯವಾಗದ ರೀತಿ ಜನಸಂದಣಿ ಉಂಟಾಯಿತು.

ಹುಟ್ಟಿದರೆ ಕನ್ನಡ ನಾಡಲ್ಲಿ‌ ಹುಟ್ಟಬೇಕು, ಯಾರಪ್ಪಂದು ಏನೈತಿ- ಬೆಳಗಾವಿ ನಮ್ಮದೈತಿ, ದಿಲ್ ಇದ್ರೆ ಬಾ- ಧಮ್ ಇದ್ರೆ ಬಾ... ಮುಂತಾದ ಹಾಡುಗಳು ಯುವಜನರ ಉನ್ಮಾದ ಹೆಚ್ಚಿಸಿದವು.

ಕಿವಿಗಡಚಿಕ್ಕುವ ಶಬ್ದ, ಸಿಳ್ಳೆ, ಕೇಕೆಗಳ ಮಳೆ, ಎದೆ ನಡುಗಿಸಿವಂಥ ಡಿ.ಜೆ ಸೌಂಡ್ ಸಿಸ್ಟಂ, ಕ್ಷಣಕ್ಷಣಕ್ಕೂ ತೇಲಿಬಂದ ಚಿತ್ರಗೀತೆಗಳಿಗೆ ಕನ್ನಡಾಭಿಮಾನಿಗಳು ದಣಿವರಿಯದೇ ಕುಣಿದರು. ಅವರನ್ನು ನೋಡುತ್ತ ನಿಂತವರ ಹೃದಯಗಳಲ್ಲೂ ಅಭಿಮಾನ ಉಕ್ಕೇರಿತು.

ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಇಮ್ಮಡಿ ಪುಲಿಕೇಶಿ, ರಾಯಣ್ಣ, ಹಂಪಿಯ ಕಲ್ಲಿನ ರಥ, ಹಲಸಿಯ ದೇವಸ್ಥಾನ, ಕಾಂತಾರ ಚಿತ್ರದ ಮಾದರಿ... ಹೀಗೆ ವೈವಿಧ್ಯಮಯ ರೂಪಕಗಳೂ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.